ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಂಬಳಗೋಡಿನ ರಾಮಸಂದ್ರ ಕೆರೆ ಬಳಿ ಘಟನೆ ನಡೆದಿದೆ. ತಾವರೆಕೆರೆಯ ಉದಯ ಲೇಔಟ್ ನಿವಾಸಿಯಾಗಿದ್ದ ರಕ್ಷಿತ್.ಎನ್ (25) ಹತ್ಯೆಯಾದವರು ಎಂದು ತಿಳಿದುಬಂದಿದೆ.
ಆರೋಪಿಗಳ ಪೈಕಿ ಮೊಹಿನ್ ಪಾಶಾ ಎಂಬಾತನನ್ನು ಬಂಧಿಸಲಾಗಿದ್ದು, ಹಸನ್ ಎಂಬಾತನಿಗಾಗಿ ಹುಡುಕಾಟ ಮುಂದುವರೆಸಲಾಗಿದೆ. ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ ರಕ್ಷಿತ್.ಎನ್ ತನ್ನ ಸ್ನೇಹಿತ ಕಂಬೀಪುರದ ವಾಸಿ ಮೋಹಿನ್ ಪಾಶಾಗೆ ಹಣ ನೀಡಿದ್ದ. ಹಣ ವಾಪಸ್ ಪಡೆದುಕೊಂಡು ಬರುವುದಾಗಿ ಮೇ 24ರಂದು ಸಂಜೆ 6 ಗಂಟೆಗೆ ಮನೆಯಿಂದ ತೆರಳಿದ್ದವನು ಮರಳಿರಲಿಲ್ಲ.
ನಂತರ ಮೇ 25ರಂದು ರಕ್ಷಿತ್ ತಾಯಿ ಕಂಬೀಪುರಕ್ಕೆ ತೆರಳಿ ಮೋಹಿನ್ ಪಾಶಾನ ಬಳಿ ಮಗನ ಬಗ್ಗೆ ವಿಚಾರಿಸಿದ್ದರು. ಆಗ ಆರೋಪಿಗಳು ಹಣಕಾಸಿನ ವಿಚಾರಕ್ಕೆ ರಕ್ಷಿತ್ ಜೊತೆ ಗಲಾಟೆ ಮಾಡಿಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ರಾಮಸಂದ್ರದ ಕೆರೆಯ ಬಳಿ ಹೂತಿರುವುದಾಗಿ ಹಾಗೂ ಆತನ ಆಟೋವನ್ನು ಜ್ಞಾನಭಾರತಿ ಬಳಿ ಬಿಟ್ಟಿರುವುದಾಗಿ ಮೋಹಿನ್ ಪಾಶಾ ಬಾಯ್ಬಿಟ್ಟಿದ್ದ.
ರಕ್ಷಿತ್ ತಾಯಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೋಹಿನ್ ಪಾಶಾನನ್ನು ಬಂಧಿಸಿದ್ದಾರೆ. ಸದ್ಯ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದ್ದಾರೆ.








