ಕೊಪ್ಪಳ: ರಾಜ್ಯ ರಾಜಕಾರಣದ ‘ಪಟ್ಟದ ಪಗಡೆ’ ಆಟ ಇದೀಗ ದೇಶದ ರಾಜಧಾನಿ ದೆಹಲಿಯ ಅಂಗಳಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ದೆಹಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸುತ್ತಿದ್ದಾರೆ. ಈ ಹೈಕಮಾಂಡ್ ಭೇಟಿಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ನಾಯಕತ್ವ ಬದಲಾವಣೆಯ ಆಟ ಬಿರುಸುಗೊಂಡಿದೆಯೇ ಎಂಬ ಚರ್ಚೆಗಳು ಮುಂಚೂಣಿಗೆ ಬಂದಿವೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಕೊಪ್ಪಳ ತಾಲೂಕಿನ ಇರಕಲ್ಗಡ ಗ್ರಾಮದಲ್ಲಿ ಗಂಗಾವತಿ ಶಾಸಕ ಹಾಗೂ ಬಿಜೆಪಿ ಮುಖಂಡ ಜಿ. ಜನಾರ್ದನ ರೆಡ್ಡಿ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. “ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ” ಎಂದು ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, “ಇಂದು ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಟ್ಟುಕೊಡುವಂತಹ ಪರಿಸ್ಥಿತಿ ಎದುರಾಗಿದೆ. ಅದಕ್ಕೆ ಪೂರಕವಾದ ವಾತಾವರಣ ಈಗಾಗಲೇ ನಿರ್ಮಾಣಗೊಂಡಿದ್ದು, ಸಿಎಂ ಸಿದ್ದರಾಮಯ್ಯನವರ ಮೇಲೆ ಹೈಕಮಾಂಡ್ನಿಂದ ಸಾಕಷ್ಟು ಒತ್ತಡವಿದೆ. ಸರ್ಕಾರದ ಅಧಿಕಾರಾವಧಿಯ ಎರಡುವರೆ ವರ್ಷಗಳು ಈಗಾಗಲೇ ಮುಗಿದುಹೋಗಿವೆ. ಆದರೂ ಕಳೆದ ಆರು ತಿಂಗಳಿನಿಂದ ಸಿದ್ದರಾಮಯ್ಯನವರು ಸ್ಥಾನ ಬಿಟ್ಟುಕೊಡುತ್ತಿಲ್ಲ” ಎಂದು ಹಾಲಿ ರಾಜಕೀಯ ಸ್ಥಿತಿಗತಿಗಳನ್ನು ವಿಶ್ಲೇಷಿಸಿದರು.
ಮುಂದುವರಿದು ಮಾತನಾಡಿದ ಅವರು, “ನನಗೆ ತಿಳಿದ ಮಟ್ಟಿಗೆ, ಸಿದ್ದರಾಮಯ್ಯನವರಿಂದ ಸಿಎಂ ಸ್ಥಾನವನ್ನು ಬಿಡಿಸುವಂತಹ ವಾತಾವರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ ಎಂದು ಅನಿಸುತ್ತಿದೆ. ಒಂದು ವೇಳೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗಿ ಮುಂದುವರಿದರೆ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ. ಇಲ್ಲದಿದ್ದರೆ ಆ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ” ಎಂದು ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಹೈಕಮಾಂಡ್ ಮಟ್ಟದ ಸಭೆಗಳು ನಡೆಯುತ್ತಿರುವಾಗಲೇ, ಪ್ರತಿಪಕ್ಷದ ಶಾಸಕ ಜನಾರ್ದನ ರೆಡ್ಡಿ ಅವರ ಈ ಹೇಳಿಕೆ ಹೊರಬಿದ್ದಿರುವುದು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.








