ಬೆಳಗಾವಿ : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋವೊಂದು ಬೈಕ್ ಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ, 9 ತಿಂಗಳ ಕಂದಮ್ಮ ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ರಾಯಬಾಗ ತಾಲ್ಲೂಕಿನ ಬೊಮ್ಮನಾಳ ಗ್ರಾಮದ ನಿವಾಸಿಗಳಾದ ಮಹಾಂತೇಶ್ ಮಾನೆ (27), ಅವರ ಪತ್ನಿ ಸಾಕ್ಷಿ ಮಾನೆ (23) ಮತ್ತು 6 ತಿಂಗಳ ಗಂಡು ಮಗು ಸಮರ್ಥ ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿದ್ದ ಮತ್ತೊಂದು ಮಗುವಿಗೆ ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸದ್ಯ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಹಾಂತೇಶ್ ಅವರು ತಮ್ಮ ಕುಟುಂಬದೊಂದಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ, ರಾಯಬಾಗ ಪಟ್ಟಣದ ಹೊರವಲಯದ ರಸ್ತೆಯಲ್ಲಿ ಎದುರುಗಡೆಯಿಂದ ನಿಯಮ ಮೀರಿ ರಾಂಗ್ ಸೈಡ್ನಲ್ಲಿ ಬಂದ ಗೂಡ್ಸ್ ಆಟೋ ಇವರ ಬೈಕ್ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಚಾಲಕನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.








