ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ ಕೆಲವೇ ದಿನಗಳ ನಂತರ, ಪರೀಕ್ಷೆಯನ್ನು ನಡೆಸಲು ಸ್ವಾಯತ್ತ ಸಂಸ್ಥೆಯೊಂದನ್ನು (Autonomous Body) ರಚಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರೀಯ ತನಿಖಾ ದಳದಿಂದ (CBI) ಪ್ರತಿಕ್ರಿಯೆ ಕೇಳಿದೆ. ಸದ್ಯಕ್ಕೆ ಎನ್‌ಟಿಎ ಸಂಸ್ಥೆಯು ನೀಟ್ ಪರೀಕ್ಷೆಯನ್ನು ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, ಎನ್‌ಟಿಎ ಬದಲಿಗೆ ಬೇರೆ ವ್ಯವಸ್ಥೆ ತರುವುದು ಮತ್ತು ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (Computer-based format) ಮಾದರಿಗೆ ಬದಲಾಯಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿತು. ಪಿಟಿಐ (PTI) ವರದಿ ಪ್ರಕಾರ, ವಿಚಾರಣೆ ವೇಳೆ ಉನ್ನತ ನ್ಯಾಯಾಲಯವು, “ಅವರು ಇನ್ನೂ ತಮ್ಮ ಪಾಠಗಳನ್ನು ಕಲಿತಿಲ್ಲ ಎಂಬುದು ಬೇಸರದ ಸಂಗತಿ. ಈ ವಿಷಯ ಈ ಹಿಂದೆಯೂ ಈ ನ್ಯಾಯಾಲಯದ ಮುಂದೆ ಬಂದಿತ್ತು. ಆಗ ಒಂದು ಸಮಿತಿ, ಉಸ್ತುವಾರಿ ಸಮಿತಿಯನ್ನು ರಚಿಸಲಾಗಿತ್ತು ಮತ್ತು ಅದು ಕೆಲವು ಶಿಫಾರಸುಗಳನ್ನು ಮಾಡಿತ್ತು, ಅವುಗಳನ್ನು ಅಂಗೀಕರಿಸಲಾಗಿತ್ತು. ಆ ಸಮಿತಿಯು ಸೂಚಿಸಿದ ಶಿಫಾರಸುಗಳ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ಕುರಿತು ಎನ್‌ಟಿಎ ಅಫಿಡವಿಟ್ ಸಲ್ಲಿಸಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿತು.
ಫೈಮಾ (FAIMA) ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ನೋಟಿಸ್
ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (FAIMA) ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ. ತನ್ನ ಅರ್ಜಿಯಲ್ಲಿ ಈ ಸಂಸ್ಥೆಯು, ಪರೀಕ್ಷೆಯನ್ನು ನಡೆಸಲು ಎನ್‌ಟಿಎ ಅನ್ನು ಪುನರ್ರಚಿಸುವಂತೆ ಅಥವಾ ಅದರ ಬದಲಿಗೆ ಸ್ವಾಯತ್ತ ವ್ಯವಸ್ಥೆಯನ್ನು ತರುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ. ಪೇಪರ್ ಸೋರಿಕೆಗಳ ಮೂಲಕ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಮೇಲಾಗಿರುವ ದ್ರೋಹವನ್ನು ಅದು ಉಲ್ಲೇಖಿಸಿದೆ.
ಮರುಪರೀಕ್ಷೆಯನ್ನು ಮೇಲ್ವಿಚಾರಣೆ ಮಾಡಲು ಹೊಸ ಸಂಸ್ಥೆಯು ರಚನೆಯಾಗುವವರೆಗೆ ಉನ್ನತ ಮಟ್ಟದ ಉಸ್ತುವಾರಿ ಸಮಿತಿಯನ್ನು ನೇಮಿಸುವಂತೆ ಆದೇಶಿಸಬೇಕೆಂದು ಈ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ಪತ್ರಿಕೆ ಸೋರಿಕೆ ಆಗದಂತೆ ತಡೆಯಲು, ಈ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಸೈಬರ್ ಭದ್ರತಾ ತಜ್ಞರು ಮತ್ತು ಫೋರೆನ್ಸಿಕ್ ವಿಜ್ಞಾನಿಗಳನ್ನು ಒಳಗೊಂಡಿರಬೇಕು ಎಂದು ಅದು ಒತ್ತಾಯಿಸಿದೆ.








