ಟೆಹ್ರಾನ್:ಕಳೆದ ಸುಮಾರು ಮೂರು ತಿಂಗಳುಗಳಿಂದ ಸಂಪೂರ್ಣ ಇಂಟರ್ನೆಟ್ ನಿಷೇಧ ಎದುರಿಸುತ್ತಿದ್ದ ಇರಾನ್ ಜನತೆಗೆ ಅಲ್ಲಿನ ಸರ್ಕಾರ ಕೊನೆಗೂ ದೊಡ್ಡ ರಿಲೀಫ್ ನೀಡಿದೆ. ದೇಶದಲ್ಲಿ ಅಂತಾರಾಷ್ಟ್ರೀಯ ಇಂಟರ್ನೆಟ್ ಸಂಪರ್ಕವನ್ನು (International Internet Access) ತಕ್ಷಣವೇ ಮರುಸ್ಥಾಪಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಮಹತ್ವದ ಆದೇಶ ಹೊರಡಿಸಿದ್ದಾರೆ.
ಇರಾನ್‌ನ ಪ್ರಮುಖ ಸುದ್ದಿ ಸಂಸ್ಥೆಗಳಾದ ತಸ್ನಿಮ್ ಮತ್ತು ಫಾರ್ಸ್ ಈ ಕುರಿತು ವರದಿ ಮಾಡಿದ್ದು, ಇಂಟರ್ನೆಟ್ ಸೇವೆಗಳನ್ನು ಜನವರಿ ತಿಂಗಳಿಗಿಂತ ಮುಂಚೆ ಇದ್ದ ಸ್ಥಿತಿಗೆ ತರಲು ಸಮಾಚಾರ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಅಧ್ಯಕ್ಷರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
87 ದಿನಗಳ ಕಾಲ ಇಂಟರ್ನೆಟ್ ಬಂದ್ ಆಗಿದ್ದು ಏಕೆ?
ಇಂಟರ್ನೆಟ್ ಉಸ್ತುವಾರಿ ಸಂಸ್ಥೆಯಾದ ‘ನೆಟ್‌ಬ್ಲಾಕ್ಸ್’ (NetBlocks) ಪ್ರಕಾರ, ಇರಾನ್‌ನಲ್ಲಿ ಸರಿಸುಮಾರು 87 ದಿನಗಳ ಕಾಲ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು.
ಮೊದಲ ಹಂತ (ಜನವರಿ): ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಇರಾನ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಾಗ ಸರ್ಕಾರ ಮೊದಲ ಬಾರಿಗೆ ಇಂಟರ್ನೆಟ್ ನಿರ್ಬಂಧಿಸಿತ್ತು. ಫೆಬ್ರವರಿಯಲ್ಲಿ ಇದು ಕೊಂಚ ಸುಧಾರಿಸಿತ್ತು.
ಎರಡನೇ ಹಂತ (ಫೆಬ್ರವರಿ 28): ಫೆಬ್ರವರಿ ಕೊನೆಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವಾಯುದಾಳಿಗಳನ್ನು ಆರಂಭಿಸಿದ ಬೆನ್ನಲ್ಲೇ, ಭದ್ರತಾ ಕಾರಣಗಳಿಗಾಗಿ ಇರಾನ್ ಸರ್ಕಾರ ದೇಶಾದ್ಯಂತ ಮತ್ತೊಮ್ಮೆ ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ‘ಬ್ಲ್ಯಾಕೌಟ್’ ಘೋಷಿಸಿತ್ತು.








