ಮನೆಯಲ್ಲಿ ಕರೆಂಟ್ ಬಿಲ್ ಕೈ ಸುಡುತ್ತಿದೆ ಎಂದು ಅನೇಕರು ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ವಿದ್ಯುತ್ ಬಿಲ್ ಹೆಚ್ಚಾಗಲು ಪ್ರಮುಖ ಕಾರಣ ಎಂಬುದು ಹಲವರಿಗೆ ತಿಳಿಯುವುದೇ ಇಲ್ಲ. ಮನೆಯಲ್ಲಿ ಬಳಸುವ ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಆಫ್ನಲ್ಲಿದ್ದರೂ ಸಹ ವಿದ್ಯುತ್ ಅನ್ನು ಬಳಸಿಕೊಳ್ಳುತ್ತಿರುತ್ತವೆ. ಟಿವಿ, ಚಾರ್ಜರ್ಗಳಂತಹ ಸಾಧನಗಳು ‘ಸ್ಟ್ಯಾಂಡ್ಬೈ ಮೋಡ್’ನಲ್ಲಿ (Standby Mode) ಇದ್ದಾಗಲೂ ಕರೆಂಟ್ ಹೀರುತ್ತಿರುತ್ತವೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, ಮನೆಯಲ್ಲಿರುವ 6 ಪ್ರಮುಖ ಗ್ಯಾಜೆಟ್ಗಳು ಸ್ಟ್ಯಾಂಡ್ಬೈ ಮೋಡ್ನಲ್ಲಿದ್ದಾಗ ಅತಿ ಹೆಚ್ಚು ವಿದ್ಯುತ್ ವ್ಯಯಿಸುತ್ತವೆ ಎಂದು ತಿಳಿದುಬಂದಿದೆ. ಹಾಗಾದರೆ ಆ ತಪ್ಪುಗಳೇನು? ಬಿಲ್ ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
1. ಟಿವಿ (TV)
ಸಾಮಾನ್ಯವಾಗಿ ಎಲ್ಲರೂ ಟಿವಿಯನ್ನು ರಿಮೋಟ್ ಮೂಲಕ ಆಫ್ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಟಿವಿ ಸಂಪೂರ್ಣವಾಗಿ ಆಫ್ ಆಗದೆ ಸ್ಟ್ಯಾಂಡ್ಬೈ ಮೋಡ್ಗೆ ಹೋಗುತ್ತದೆ. ಈ ಸಮಯದಲ್ಲಿ ಸ್ಕ್ರೀನ್ ಆಫ್ ಆಗಿದ್ದರೂ ಸಹ, ಒಳಗಿನ ಸರ್ಕ್ಯೂಟ್ಗಳು ವಿದ್ಯುತ್ ಅನ್ನು ಬಳಸುತ್ತಲೇ ಇರುತ್ತವೆ. ಆದ್ದರಿಂದ ಟಿವಿ ನೋಡಿದ ನಂತರ ಅದರ ಮೇನ್ ಪವರ್ ಸ್ವಿಚ್ ಅನ್ನು ಕಡ್ಡಾಯವಾಗಿ ಆಫ್ ಮಾಡಿ.
2. ಸೆಟ್-ಟಾಪ್ ಬಾಕ್ಸ್ (Set-Top Box)
ಟಿವಿ ಆಫ್ ಮಾಡಿದರೂ ಸೆಟ್-ಟಾಪ್ ಬಾಕ್ಸ್ನ ಲೈಟ್ ಉರಿಯುತ್ತಿರುವುದನ್ನು ನೀವು ಗಮನಿಸಿರಬಹುದು. ಇದನ್ನು ಕೇವಲ ರಿಮೋಟ್ನಿಂದ ಆಫ್ ಮಾಡಿದರೆ ಸಾಲದು. ಟಿವಿಯ ಜೊತೆಗೆ ಸೆಟ್-ಟಾಪ್ ಬಾಕ್ಸ್ನ ಮೇನ್ ಸ್ವಿಚ್ ಅನ್ನು ಕೂಡ ಬಂದ್ ಮಾಡುವುದರಿಂದ ಕರೆಂಟ್ ಉಳಿಸಬಹುದು.
3. ಮೊಬೈಲ್/ಲ್ಯಾಪ್ಟಾಪ್ ಚಾರ್ಜರ್ಗಳು (Chargers)
ಮೊಬೈಲ್ ಚಾರ್ಜ್ ಆದ ತಕ್ಷಣ ಫೋನ್ ಅನ್ನು ಮಾತ್ರ ತೆಗೆಯುವ ಅಭ್ಯಾಸ ಹೆಚ್ಚಿನವರಿಗಿದೆ. ಚಾರ್ಜರ್ ಸಾಕೆಟ್ನಲ್ಲೇ ಇರುತ್ತದೆ ಮತ್ತು ಸ್ವಿಚ್ ಕೂಡ ಆನ್ ಇರುತ್ತದೆ. ಹೀಗೆ ಮಾಡುವುದರಿಂದ ಚಾರ್ಜರ್ ನಿರಂತರವಾಗಿ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ ಚಾರ್ಜಿಂಗ್ ಮುಗಿದ ತಕ್ಷಣ ಚಾರ್ಜರ್ ಅನ್ನು ಸಾಕೆಟ್ನಿಂದ ಹೊರತೆಗೆಯಿರಿ ಅಥವಾ ಸ್ವಿಚ್ ಆಫ್ ಮಾಡಿ.
4. ಹವಾನಿಯಂತ್ರಣ ಯಂತ್ರ (AC)
ಬೇಸಿಗೆಯಲ್ಲಿ ಎಸಿ ಬಳಕೆ ಹೆಚ್ಚು. ಆದರೆ ಎಸಿಯನ್ನು ಕೇವಲ ರಿಮೋಟ್ನಿಂದ ಆಫ್ ಮಾಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಇದು ತಪ್ಪು ನಿರ್ಧಾರ. ರಿಮೋಟ್ನಿಂದ ಆಫ್ ಮಾಡಿದಾಗ ಎಸಿಯ ಒಳಗಿನ ಇಂಟರ್ನಲ್ ಸರ್ಕ್ಯೂಟ್ ಸ್ಟ್ಯಾಂಡ್ಬೈ ಮೋಡ್ನಲ್ಲಿರುತ್ತದೆ. ಹಾಗಾಗಿ, ಎಸಿ ಬಳಸಿದ ನಂತರ ಅದರ ಮೇನ್ ಪವರ್ ಸ್ವಿಚ್ ಆಫ್ ಮಾಡುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ.
5. ವೈ-ಫೈ ರೌಟರ್ (Wi-Fi Router)
ಇಂಟರ್ನೆಟ್ ಅಗತ್ಯವಿಲ್ಲದಿದ್ದಾಗಲೂ ವೈ-ಫೈ ರೌಟರ್ ದಿನದ 24 ಗಂಟೆಯೂ ಆನ್ನಲ್ಲೇ ಇರುತ್ತದೆ. ವಿಶೇಷವಾಗಿ ರಾತ್ರಿ ಮಲಗುವಾಗ ಅಥವಾ ಮನೆಯಿಂದ ಹೊರಗಡೆ ಹೋಗುವಾಗ ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಅಂತಹ ಸಮಯದಲ್ಲಿ ರೌಟರ್ ಸ್ವಿಚ್ ಆಫ್ ಮಾಡುವುದರಿಂದ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ.
6. ವಾಟರ್ ಪ್ಯೂರಿಫೈಯರ್ (RO Water Purifier)
ಮನೆಯಲ್ಲಿರುವ ವಾಟರ್ ಪ್ಯೂರಿಫೈಯರ್ (RO) ಅನ್ನು ಸದಾ ಆನ್ ಇಡುವ ಅಗತ್ಯವಿಲ್ಲ. ಆರ್ಒ ಟ್ಯಾಂಕ್ ಸಂಪೂರ್ಣವಾಗಿ ತುಂಬಿದ ನಂತರ, ಅದರಲ್ಲಿರುವ ನೀರು ಖಾಲಿಯಾಗುವವರೆಗೆ ಪ್ಯೂರಿಫೈಯರ್ ಸ್ವಿಚ್ ಅನ್ನು ಆಫ್ ಮಾಡಿಡಿ. ಇದು ಕೂಡ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮನೆಯಲ್ಲಿ ಈ 6 ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ಪ್ರತಿ ತಿಂಗಳು ಬರುವ ಕರೆಂಟ್ ಬಿಲ್ ಅನ್ನು ಸುಲಭವಾಗಿ ಆದಾ ಮಾಡಬಹುದು.








