ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವ ಗಡುವನ್ನು ಮತ್ತೊಂದು ವರ್ಷದವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ತಾಜಾ ಆದೇಶದ ಪ್ರಕಾರ, ಸಾರ್ವಜನಿಕರು 2027ರ ಜೂನ್ 14ರವರೆಗೆ ‘myAadhaar’ ಪೋರ್ಟಲ್ ಮೂಲಕ ತಮ್ಮ ದಾಖಲೆಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಮೇ 13 ರಂದು ಹೊರಡಿಸಲಾದ ಅಧಿಕೃತ ಜ್ಞಾಪನಾ ಪತ್ರದ (ಮೆಮೊರಾಂಡಂ) ಪ್ರಕಾರ UIDAI ಈ ನಿರ್ಧಾರವನ್ನು ಪ್ರಕಟಿಸಿದೆ.
ಹಳೇ ಆ್ಯಪ್ ಸ್ಥಗಿತ; ಹೊಸ ‘ಆಧಾರ್ ಆ್ಯಪ್’ ಬಿಡುಗಡೆ
ಮತ್ತೊಂದೆಡೆ, ತಂತ್ರಜ್ಞಾನದ ದೃಷ್ಟಿಯಿಂದಲೂ UIDAI ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ‘ಎಂಆಧಾರ್’ (mAadhaar) ಆ್ಯಪ್ ಅನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅದರ ಬದಲಿಗೆ ಹೆಚ್ಚಿನ ಭದ್ರತೆ ಮತ್ತು ಅತ್ಯಾಧುನಿಕ ಫೀಚರ್ಗಳನ್ನು ಒಳಗೊಂಡ ಹೊಸ ‘Aadhaar app’ ಅನ್ನು ಜನರಿಗೆ ಪರಿಚಯಿಸಿದೆ. ಈ ಹೊಸ ಆ್ಯಪ್ನಲ್ಲಿ ಉತ್ತಮ ಪ್ರೈವೆಸಿ ನಿಯಂತ್ರಣಗಳು, ಸುಲಭ ಸೇವೆಗಳು ಮತ್ತು ಕ್ಯೂಆರ್ ಕೋಡ್ (QR Code) ಆಧಾರಿತ ಆಧಾರ್ ಹಂಚಿಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಹೊಸ ಆ್ಯಪ್ಗೆ ಭಾರಿ ಜನಪ್ರಿಯತೆ
ಕೇಂದ್ರ ಐಟಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಈ ಹೊಸ ಆ್ಯಪ್ಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 2.1 ಕೋಟಿಗೂ ಹೆಚ್ಚು ಜನರು ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಈ ಹೊಸ ಆ್ಯಪ್ ಮೂಲಕ ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತು ಸುಮಾರು 6 ಲಕ್ಷ ಜನರು ತಮ್ಮ ವಿಳಾಸವನ್ನು ಯಶಸ್ವಿಯಾಗಿ ಅಪ್ಡೇಟ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಅತ್ಯಾಧುನಿಕ ಆ್ಯಪ್ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರಿಬ್ಬರಿಗೂ ಲಭ್ಯವಿದೆ.








