ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅದರ ಹಿಂಭಾಗವು (Tail) ರನ್ವೇಗೆ ಉಜ್ಜಿದ ಕಾರಣ, ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ (Grounded).
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. “ತನಿಖೆ ಬಾಕಿ ಇರುವವರೆಗೆ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ಗಳನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ (Off rostered),” ಎಂದು ಅಧಿಕಾರಿಗಳಲ್ಲೊಬ್ಬರು ಹೇಳಿದ್ದಾರೆ.
ಘಟನೆಯನ್ನು ದೃಢಪಡಿಸಿರುವ ಏರ್ ಇಂಡಿಯಾ ಸಂಸ್ಥೆ, “ಮೇ 21 ರಂದು ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ AI2651 ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಟೇಲ್-ಸ್ಟ್ರೈಕ್ (ಹಿಂಭಾಗ ಉಜ್ಜುವುದು) ಅನುಭವಿಸಿದೆ. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾಮಾನ್ಯ ರೀತಿಯಲ್ಲೇ ಕೆಳಗಿಳಿದಿದ್ದಾರೆ” ಎಂದು ತಿಳಿಸಿದೆ.
ಮುಂದುವರಿದು ಸಂಸ್ಥೆಯು, “ವಿಮಾನವನ್ನು ವಿವರವಾದ ಪರಿಶೀಲನೆಗಾಗಿ ಸ್ಥಗಿತಗೊಳಿಸಲಾಗಿದೆ. ಸಂಬಂಧಿತ ನಿಯಂತ್ರಕ ಸಂಸ್ಥೆಗಳ ಸಮನ್ವಯದೊಂದಿಗೆ, ನಿಗದಿಪಡಿಸಿದ ನಿಯಮಾವಳಿಗಳ ಪ್ರಕಾರ ಈ ಘಟನೆಯ ತನಿಖೆ ನಡೆಸಲಾಗುವುದು” ಎಂದು ಹೇಳಿದೆ.
ಈ ಘಟನೆಯ ಪರಿಣಾಮವಾಗಿ, ಇದರ ನಂತರ ಬೆಂಗಳೂರಿನಿಂದ ದೆಹಲಿಗೆ ಹೊರಡಬೇಕಾಗಿದ್ದ AI2652 ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್ಲೈನ್ಸ್ ದೃಢಪಡಿಸಿದೆ.
”ಸಂತ್ರಸ್ತ ಪ್ರಯಾಣಿಕರಿಗೆ ಆದಷ್ಟು ಬೇಗ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ… ಇದರಿಂದ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ,” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಮತ್ತೊಬ್ಬ ಅಧಿಕಾರಿಯ ಪ್ರಕಾರ, “ಗಾಳಿಯಲ್ಲಿ ಉಂಟಾದ ತೀವ್ರ ಏರುಪೇರಿನಿಂದಾಗಿ (Wake Turbulence) ಈ ಘಟನೆ ಸಂಭವಿಸಿದೆ. ಈ ಕಾರಣದಿಂದಾಗಿ ಪೈಲಟ್ಗಳು ಕೊನೆಯ ಕ್ಷಣದಲ್ಲಿ ವಿಮಾನವನ್ನು ಮತ್ತೆ ಮೇಲಕ್ಕೆ ಕೊಂಡೊಯ್ಯಲು (Go-around) ನಿರ್ಧರಿಸಿದ್ದಾರೆ.” ಇನ್ನೊಬ್ಬ ಅಧಿಕಾರಿ ಮಾತನಾಡಿ, “ಏರ್ ಇಂಡಿಯಾ ವಿಮಾನವು ಇಳಿಯಲು ಪ್ರಯತ್ನಿಸುವ ಕೆಲವೇ ಕ್ಷಣಗಳ ಮುನ್ನ ಬಿ೭೪೭ (B747) ಸರಕು ಸಾಗಣೆ ವಿಮಾನವೊಂದು ಟೇಕ್-ಆಫ್ ಆಗಿತ್ತು. ಇದರಿಂದಾಗಿ ಉಂಟಾದ ಗಾಳಿಯ ತಲ್ಲಣದಿಂದ ಎ೩೨೧ (A321) ವಿಮಾನವು ಗೋ-ಅರೌಂಡ್ ಪ್ರಕ್ರಿಯೆ ಮಾಡಬೇಕಾಯಿತು,” ಎಂದಿದ್ದಾರೆ.








