ವಾಷಿಂಗ್ಟನ್:ದಶಕಗಳಿಂದ ಕಮ್ಯುನಿಸ್ಟ್ ಆಡಳಿತದ ಹಿಡಿತದಲ್ಲಿರುವ ಕ್ಯೂಬಾ ದೇಶದ ರಾಜಕಾರಣದಲ್ಲಿ ಜಾಗತಿಕ ಮಟ್ಟದ ಭಾರಿ ರಾಜತಾಂತ್ರಿಕ ಸಂಚಲನ ಉಂಟಾಗಿದೆ. ಕ್ಯೂಬಾದ ದೀರ್ಘಕಾಲದ ಸರ್ವಾಧಿಕಾರಿ ಹಾಗೂ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ (Raul Castro) ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ಗಂಭೀರ ಅಪರಾಧಗಳ ಅಡಿಯಲ್ಲಿ ದೋಷಾರೋಪಣೆ ಪಟ್ಟಿ ದಾಖಲಿಸಿದೆ. ಈ ಐತಿಹಾಸಿಕ ಬೆಳವಣಿಗೆಯನ್ನು ಮುಕ್ತವಾಗಿ ಸ್ವಾಗತಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಾವು ಕ್ಯೂಬಾವನ್ನು ಕಮ್ಯುನಿಸಂ ಮುಷ್ಟಿಯಿಂದ ಮುಕ್ತಗೊಳಿಸುತ್ತಿದ್ದೇವೆ,” ಎಂದು ವಿಜಯೋತ್ಸವದ ಧಾಟಿಯಲ್ಲಿ ಘೋಷಿಸಿದ್ದಾರೆ.
ಅಮೆರಿಕದ ರಕ್ಷಣಾ ಮತ್ತು ಕಾನೂನು ಇಲಾಖೆಗಳು ಜಂಟಿಯಾಗಿ ನಡೆಸಿರುವ ತನಿಖೆಯ ಆಧಾರದ ಮೇಲೆ 94 ವರ್ಷದ ರೌಲ್ ಕ್ಯಾಸ್ಟ್ರೋ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ:
ಕ್ಯೂಬಾದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲಕ್ಕೆ (Drug Trafficking) ಕುಮ್ಮಕ್ಕು ನೀಡಿದ್ದು ಹಾಗೂ ರಾಜಕೀಯ ವಿರೋಧಿಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಮೂಲಕ ಭೀಕರ ಮಾನವ ಹಕ್ಕು ಉಲ್ಲಂಘನೆ ಎಸಗಿದ ಆರೋಪಗಳನ್ನು ಕ್ಯಾಸ್ಟ್ರೋ ವಿರುದ್ಧ ಹೊರಿಸಲಾಗಿದೆ.
ಕ್ಯೂಬಾ ಸರ್ಕಾರವು ಅಮೆರಿಕದ ಗಡಿಯ ಸಮೀಪದಲ್ಲೇ ಅಂತರರಾಷ್ಟ್ರೀಯ ಅಪರಾಧ ಜಾಲಗಳಿಗೆ ಆಶ್ರಯ ನೀಡುವ ಮೂಲಕ ಯುಎಸ್ ಭದ್ರತೆಗೆ ನಿರಂತರವಾಗಿ ಧಕ್ಕೆ ತರುತ್ತಿತ್ತು ಎಂದು ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ.
ಶ್ವೇತಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಈ ನಿರ್ಧಾರವು ಕ್ಯೂಬಾದ ಇತಿಹಾಸದಲ್ಲೇ ಹೊಸ ಮುಂಜಾವಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.








