ಹೋಮಿಯೋಪತಿ ವೈದ್ಯರೊಬ್ಬರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಏಕಸದಸ್ಯ ಪೀಠವು, ಕೇರಳ ಬಾರ್ ಕೌನ್ಸಿಲ್ (BCK) ತೆಗೆದುಕೊಂಡಿದ್ದ ನಿರ್ಧಾರವನ್ನು ಎತ್ತಿಹಿಡಿದಿದೆ. ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ವೃತ್ತಿಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ಮತ್ತು ಕಾನೂನು ವೃತ್ತಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಬಾರ್ ಕೌನ್ಸಿಲ್ ವಿಧಿಸಿರುವ ಈ ನಿಯಮ ಸೂಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಯಾವುದೇ ಒಬ್ಬ ವೃತ್ತಿಪರರು ತಮ್ಮ ನಿಷ್ಠೆಯನ್ನು ಎರಡು ಬೇರೆ ಬೇರೆ ವೃತ್ತಿಗಳಿಗೆ ಹಂಚಲು ಸಾಧ್ಯವಿಲ್ಲ. ಎರಡು ದೋಣಿಗಳ ಮೇಲೆ ಕಾಲಿಡುವುದರಿಂದ ವೃತ್ತಿಯ ಮೌಲ್ಯಗಳು ಕುಸಿಯಬಹುದು. ಅಷ್ಟೇ ಅಲ್ಲದೆ, ಇದು ಒಂದೇ ಸಮಯದಲ್ಲಿ ಇಬ್ಬರು ‘ಯಜಮಾನರನ್ನು’ ಸೇವಿಸಿದಂತೆ ಆಗುತ್ತದೆ. ಕಾನೂನು ವೃತ್ತಿಯು ಸಂಪೂರ್ಣ ಸಮರ್ಪಣೆಯನ್ನು ಬಯಸುವ ಕ್ಷೇತ್ರವಾಗಿದ್ದು, ಇಲ್ಲಿ ದ್ವಂದ್ವ ನಿಷ್ಠೆಗೆ ಅವಕಾಶವಿಲ್ಲ” ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಮಾರ್ಮಿಕವಾಗಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಟಿ.ಎಂ. ಮಂಜು ಎಂಬುವವರು ಹೋಮಿಯೋಪತಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ನಂತರ ಅವರು 3 ವರ್ಷಗಳ ಎಲ್ಎಲ್ಬಿ ಪದವಿ ಮುಗಿಸಿ, ಅಖಿಲ ಭಾರತ ಬಾರ್ ಪರೀಕ್ಷೆಯಲ್ಲೂ (AIBE) ಉತ್ತೀರ್ಣರಾಗಿದ್ದರು. ತದನಂತರ ನವೆಂಬರ್ 2025 ರಲ್ಲಿ ಕೇರಳ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.
ಆದರೆ, ದಾಖಲೆಗಳ ಪರಿಶೀಲನೆ ವೇಳೆ ಅವರು ತಮ್ಮ ಹೋಮಿಯೋಪತಿ ವೈದ್ಯಕೀಯ ನೋಂದಣಿಯನ್ನು ರದ್ದುಗೊಳಿಸಿದ ಪ್ರಮಾಣಪತ್ರವನ್ನು ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಅವರಿಗೆ ವಕೀಲರಾಗಿ ದಾಖಲಾಗಲು ಅನುಮತಿ ನಿರಾಕರಿಸಿತ್ತು.
ಅರ್ಜಿದಾರರು ತಾವು ಕ್ಲಿನಿಕ್ ನಡೆಸಲು ಮುನ್ಸಿಪಲ್ ಕಾರ್ಪೊರೇಶನ್ನಿಂದ ಪಡೆದಿದ್ದ ಪರವಾನಗಿಯನ್ನು (ಲೈಸೆನ್ಸ್) ಈಗಾಗಲೇ ರದ್ದುಗೊಳಿಸಿರುವುದಾಗಿ ಮತ್ತು ವಕೀಲರಾದ ಬಳಿಕ ವೈದ್ಯಕೀಯ ವೃತ್ತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಲು ಸಿದ್ಧರಿರುವುದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಕೇರಳ ರಾಜ್ಯ ವೈದ್ಯಕೀಯ ಕೌನ್ಸಿಲ್ನ ಅಧಿಕೃತ ರಿಜಿಸ್ಟರ್ನಲ್ಲಿ ಇನ್ನೂ ಅವರ ಹೆಸರು ಇರುವುದರಿಂದ, ಅವರಿಗೆ ವೈದ್ಯಕೀಯ ವೃತ್ತಿ ಮಾಡುವ ಕಾನೂನಾತ್ಮಕ ಹಕ್ಕು ಹಾಗೇ ಇರುತ್ತದೆ ಎಂದು ಬಾರ್ ಕೌನ್ಸಿಲ್ ವಾದಿಸಿತ್ತು.
ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ನ ಹಳೆಯ ತೀರ್ಪೊಂದನ್ನು ಉಲ್ಲೇಖಿಸಿ, ಕಾನೂನು ವೃತ್ತಿಗೆ ಪೂರ್ಣ ಸಮಯದ ಸಮರ್ಪಣೆ ಅಗತ್ಯವಿರುವುದರಿಂದ ವೈದ್ಯಕೀಯ ನೋಂದಣಿ ರದ್ದಾಗದ ಹೊರತು ವಕೀಲರಾಗಿ ನೋಂದಣಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.






