ಹೈದ್ರಾಬಾದ್ : ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ಭೀಕರ ಘಟನೆಯೊಂದು ನಡೆದಿದೆ. ಹಾಡಹಗಲೇ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಆಕೆಯ ಪತಿಯೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೈದ್ರಾಬಾದ್‌ನ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ದಿಗ್ಭ್ರಮೆ ಮೂಡಿಸಿದೆ.
ಕೊಲೆಯಾದ ದುರ್ದೈವಿಯನ್ನು ಬಹಾದ್ದೂರ್ ಪುರದ ಕಿಶನ್ ಬಾಗ್ ನಿವಾಸಿ ಬಂಗಿ ದೇಬೋರ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಸ್ಪಾ ಒಂದರಲ್ಲಿ ಬ್ಯೂಟಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದಾ ಸಾರ್ವಜನಿಕರ ಓಡಾಟವಿರುವ ಹಾಗೂ ವಾಣಿಜ್ಯ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಭದ್ರತೆಯ ಕುರಿತು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗಳ ನಡುವೆ ಇದ್ದ ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಗೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ. ಘಟನೆ ನಡೆದ ದಿನದ ಮುಂಜಾನೆ ಪತಿ ಮತ್ತು ಪತ್ನಿ ನಡುವೆ ಮನೆಯಲ್ಲಿ ತೀವ್ರ ಮಾತಿನ ಚಕಮಕಿ ಹಾಗೂ ಜಗಳ ನಡೆದಿತ್ತು ಎನ್ನಲಾಗಿದೆ. ಮನೆಯಲ್ಲಿ ಜಗಳವಾದ ಬಳಿಕ ಬಂಗಿ ದೇಬೋರ ಅವರು ಎಂದಿನಂತೆ ತಮ್ಮ ದೈನಂದಿನ ಕೆಲಸಕ್ಕಾಗಿ ಸ್ಪಾಗೆ ತೆರಳಿದ್ದರು.
ಆದರೆ, ಸಿಟ್ಟಿನಲ್ಲಿದ್ದ ಪತಿ ಪತ್ನಿಯನ್ನೇ ಹಿಂಬಾಲಿಸಿಕೊಂಡು ಆಕೆ ಕೆಲಸ ಮಾಡುತ್ತಿದ್ದ ಸ್ಪಾಗೆ ನುಗ್ಗಿದ್ದಾನೆ. ಬಂಗಿ ದೇಬೋರ ಅವರು ಸ್ಪಾದಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗಲೇ ಏಕಾಏಕಿ ಮಚ್ಚಿನಿಂದ ಮನಬಂದಂತೆ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಜಾಗದಲ್ಲೇ ಬಂಗಿ ದೇಬೋರ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಾಂಧಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ಪತಿಯನ್ನು ಬಂಧಿಸಲು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.








