ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 20.05.2026 ರಿಂದ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿಯು ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ಮುಷ್ಕರದ ಹಿನ್ನೆಲೆ ಮತ್ತು ನೌಕರರ ಆಕ್ರೋಶ
ಸಾರಿಗೆ ನೌಕರರ ಬೇಡಿಕೆಗಳನ್ನು ಪರಿಗಣಿಸದೆ ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ಆದೇಶಗಳನ್ನು ಹೊರಡಿಸುತ್ತಾ ಬಂದಿತ್ತು. ಮುಷ್ಕರದ ನೋಟಿಸ್ ನೀಡಿದ ಬಳಿಕವೂ, ದಿನಾಂಕ 12.05.2026 ರಂದು ಸರ್ಕಾರವು ಜಂಟಿ ಕ್ರಿಯಾ ಸಮಿತಿಯೊಂದಿಗೆ ಯಾವುದೇ ಚರ್ಚೆ ನಡೆಸದೆ, ಮೂಲ ವೇತನಕ್ಕೆ ಶೇಕಡ 12.5 ರಷ್ಟು ಹೆಚ್ಚಳ ಮಾಡುವ ಮತ್ತೊಂದು ಏಕಪಕ್ಷೀಯ ಆದೇಶ ಹೊರಡಿಸಿತ್ತು. ಸರ್ಕಾರದ ಈ ಕ್ರಮದಿಂದ ತೀವ್ರ ಅಸಮಾಧಾನಗೊಂಡಿದ್ದ ನೌಕರರು, ನಾಲ್ಕೂ ನಿಗಮಗಳ ವಿಭಾಗೀಯ ಮತ್ತು ಘಟಕ ಮಟ್ಟದಲ್ಲಿ ಸಿದ್ಧತಾ ಸಮಾವೇಶ ಹಾಗೂ ದ್ವಾರಸಭೆಗಳನ್ನು ನಡೆಸುವ ಮೂಲಕ ಮುಷ್ಕರಕ್ಕೆ ದೃಢವಾದ ಸಿದ್ಧತೆ ಮಾಡಿಕೊಂಡಿದ್ದರು.
ಹೈಕೋರ್ಟ್ ಪ್ರವೇಶ ಮತ್ತು ಆದೇಶ
ಪರಿಸ್ಥಿತಿ ಹೀಗಿರುವಾಗ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ (ಸಂಖ್ಯೆ: 15683/2026 GM-PIL) ಸಲ್ಲಿಕೆಯಾಗಿತ್ತು. ದಿನಾಂಕ 19.05.2026 ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಘನ ನ್ಯಾಯಾಲಯವು, ಉದ್ದೇಶಿತ ಮುಷ್ಕರವನ್ನು ಕೈಬಿಟ್ಟು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸಿತು.
ಅಲ್ಲದೆ, ಸಾರಿಗೆ ನೌಕರರ ಸಮಸ್ಯೆಗಳ ನಿವಾರಣೆಗೆ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಜಂಟಿ ಕ್ರಿಯಾ ಸಮಿತಿಯ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಭೆಯನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಸಭೆಯ ದಿನಾಂಕವನ್ನು ಮುಂದಿನ ವಿಚಾರಣೆಯ ದಿನವಾದ 21.05.2026 ರಂದು ಕೋರ್ಟ್‌ಗೆ ತಿಳಿಸಬೇಕೆಂದು ಆದೇಶಿಸಿದೆ.
ಮುಷ್ಕರದ ನೋಟಿಸ್ ವಾಪಸ್
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಎಐಟಿಯುಸಿ (AITUC) ರಾಜ್ಯ ಸಮಿತಿ ಕಚೇರಿಯಲ್ಲಿ ತುರ್ತು ಸಭೆ ಸೇರಿದ ಜಂಟಿ ಕ್ರಿಯಾ ಸಮಿತಿಯು ಕೂಲಂಕುಶವಾಗಿ ಚರ್ಚೆ ನಡೆಸಿತು. ನ್ಯಾಯಾಲಯದ ಆದೇಶವನ್ನು ಗೌರವಿಸಿ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿದ ಸಮಿತಿಯು, ದಿನಾಂಕ 29.04.2026 ರಂದು ನೀಡಿದ್ದ ಮುಷ್ಕರದ ನೋಟೀಸ್ ಅನ್ನು ಅಧಿಕೃತವಾಗಿ ವಾಪಸ್ ಪಡೆದಿದೆ.
ಮುಂದಿನ ಭರವಸೆ ಮತ್ತು ಕೃತಜ್ಞತೆ
“ಹೈಕೋರ್ಟ್ ಆದೇಶದ ಮೂಲಕ ಮುಖ್ಯಮಂತ್ರಿಗಳ ಜೊತೆ ನೇರ ಮಾತುಕತೆಗೆ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು, ಮುಂದಿನ ದಿನಗಳಲ್ಲಿ ನೌಕರರ ಬೇಡಿಕೆಗಳನ್ನು ಯಶಸ್ವಿಯಾಗಿ ಈಡೇರಿಸಿಕೊಳ್ಳುತ್ತೇವೆ ಎಂಬ ಭರವಸೆ ನಮಗಿದೆ” ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಕರಾದ ಬಿ. ಜಯದೇವರಾಜೇ ಅರಸು ಅವರು ತಿಳಿಸಿದ್ದಾರೆ.
ಮುಷ್ಕರದ ಸಿದ್ಧತೆಯಲ್ಲಿ ಅಭೂತಪೂರ್ವ ಒಗ್ಗಟ್ಟು, ಬದ್ಧತೆ ಹಾಗೂ ತಾಳ್ಮೆಯನ್ನು ಪ್ರದರ್ಶಿಸಿದ ನಾಲ್ಕೂ ನಿಗಮಗಳ ಸಾರಿಗೆ ನೌಕರ ಬಂಧುಗಳಿಗೆ ಕ್ರಿಯಾ ಸಮಿತಿಯು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂದಿನ ದಿನಗಳ ಹೋರಾಟಕ್ಕೂ ಇದೇ ರೀತಿಯ ಸಹಕಾರವನ್ನು ಕೋರಿದೆ.








