ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಜಗತ್ತಿನಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದ ಮೇಲೂ ಇದು ಗಣನೀಯ ಪ್ರಭಾವ ಬೀರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಿತವಾಗಿ ಬಳಸುವಂತೆ ಸ್ವತಃ ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬೆನ್ನಲ್ಲೇ, ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ (Indane), ಭಾರತ್ ಗ್ಯಾಸ್ (Bharat Gas) ಮತ್ತು ಎಚ್‌ಪಿ ಗ್ಯಾಸ್ (HP Gas) ಗ್ರಾಹಕರಿಗೆ ಸಿಲಿಂಡರ್ ವಿತರಣೆ ಹಾಗೂ ಸಬ್ಸಿಡಿಗೆ ಸಂಬಂಧಿಸಿದಂತೆ ಮಹತ್ವದ ನಿಯಮಗಳನ್ನು ಬದಲಾಯಿಸುತ್ತಿವೆ. ಸದ್ಯ ಅನೇಕ ಎಲ್‌ಪಿಜಿ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ತೈಲ ಕಂಪನಿಗಳಿಂದ ವಿಶೇಷ ಸಂದೇಶಗಳು (SMS) ಬರುತ್ತಿದ್ದು, ಗ್ರಾಹಕರು ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.
ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ನಿರ್ದಿಷ್ಟ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಯಾವುದೇ ಒಬ್ಬ ಗ್ರಾಹಕ ಅಥವಾ ಅವರ ಇಡೀ ಕುಟುಂಬದ ಒಟ್ಟು ವಾರ್ಷಿಕ ಆದಾಯವು ರೂ. 10 ಲಕ್ಷಕ್ಕಿಂತ ಹೆಚ್ಚಾಗಿದ್ದರೆ, ಅವರಿಗೆ ಗ್ಯಾಸ್ ಸಬ್ಸಿಡಿ ಲಭ್ಯವಿರುವುದಿಲ್ಲ. ಇದೀಗ ತೈಲ ಕಂಪನಿಗಳು ಆದಾಯ ತೆರಿಗೆ (Income Tax) ದಾಖಲೆಗಳನ್ನು ಆಧರಿಸಿ, ಮಿತಿಗಿಂತ ಹೆಚ್ಚು ಆದಾಯ ಹೊಂದಿರುವ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸುತ್ತಿವೆ.
ಗ್ರಾಹಕರಿಗೆ ಬರುತ್ತಿರುವ SMS ನಲ್ಲೇನಿದೆ?
ಪ್ರಿಯ ಎಲ್‌ಪಿಜಿ ಗ್ರಾಹಕರೇ, ಲಭ್ಯವಿರುವ ಆದಾಯ ತೆರಿಗೆ ದಾಖಲೆಗಳ ಪ್ರಕಾರ, ನಿಮ್ಮ ಒಟ್ಟು ತೆರಿಗೆಗೆ ಒಳಪಡುವ ಆದಾಯ (ಅಥವಾ ಒಂದೇ ಎಲ್‌ಪಿಜಿ ಸಂಪರ್ಕದ ಮೇಲಿರುವ ಇಡೀ ಕುಟುಂಬದ ಒಟ್ಟು ಆದಾಯ) ನಿಗದಿಪಡಿಸಿದ ವಾರ್ಷಿಕ ಮಿತಿ ರೂ. 10 ಲಕ್ಷವನ್ನು ಮೀರಿದೆ. ಒಂದು ವೇಳೆ ನೀವು ಇದನ್ನು ವಿರೋಧಿಸುವುದಾದರೆ (ನಿಮ್ಮ ಆದಾಯ 10 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ), ಈ ಸಂದೇಶ ಬಂದ 7 ದಿನಗಳ ಒಳಗಾಗಿ ಟೋಲ್-ಫ್ರೀ ಸಂಖ್ಯೆ 1800-2333-555 ಗೆ ಕರೆ ಮಾಡಿ ಅಥವಾ ನಿಮ್ಮ ತೈಲ ಕಂಪನಿಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ದೂರು ದಾಖಲಿಸಿ. ನಿಗದಿತ ಅವಧಿಯೊಳಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನಿಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗುವುದು.”
ಸದ್ಯದ ಸಬ್ಸಿಡಿ ನಿಯಮಗಳು ಹೀಗಿವೆ:
ಅರ್ಹತೆ: ಇಕೆವೈಸಿ (e-KYC) ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ, ಹಾಗೂ ವಾರ್ಷಿಕ ಆದಾಯ 10 ಲಕ್ಷ ರೂ. ಒಳಗೆ ಇರುವ ಕುಟುಂಬಗಳು ಸಬ್ಸಿಡಿಗೆ ಅರ್ಹರು.
ಸಿಲಿಂಡರ್‌ಗಳ ಮಿತಿ: ಅರ್ಹ ಗ್ರಾಹಕರಿಗೆ ವರ್ಷಕ್ಕೆ ಗರಿಷ್ಠ 12 ಸಿಲಿಂಡರ್‌ಗಳವರೆಗೆ ಸಬ್ಸಿಡಿ ಸಿಗಲಿದೆ.
ಸಬ್ಸಿಡಿ ಮೊತ್ತ: ಪ್ರಸ್ತುತ ಕೇಂದ್ರ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆ ಸುಮಾರು ರೂ. 300 ಸಬ್ಸಿಡಿ ನೀಡುತ್ತಿದ್ದು, ಗ್ರಾಹಕರು ಸಿಲಿಂಡರ್ ಕೊಳ್ಳಲು ಸರಿಸುಮಾರು ರೂ. 900 ರಿಂದ ರೂ. 950 ರವರೆಗೆ ಪಾವತಿಸಬೇಕಾಗುತ್ತಿದೆ. ಆದಾಯ 10 ಲಕ್ಷ ದಾಟಿದವರಿಗೆ ಈ ಸಬ್ಸಿಡಿ ಕಡಿತವಾಗಲಿದೆ.
ಗಮನಿಸಿ: ಕೇಂದ್ರ ಸರ್ಕಾರದ ‘ಉಜ್ವಲ ಯೋಜನೆ’ಯ (Ujjwala Yojana) ಅಡಿಯಲ್ಲಿ ಈಗಾಗಲೇ ಉಚಿತ/ರಿಯಾಯಿತಿ ದರದಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವ ಬಡ ಕುಟುಂಬಗಳಿಗೆ ಈ ಯಾವುದೇ ನೋಟಿಸ್‌ಗಳು ಅನ್ವಯಿಸುವುದಿಲ್ಲ ಮತ್ತು ಅವರ ಸಬ್ಸಿಡಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.








