ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ನಗರದ ಪ್ರಮುಖ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ, ಸಿಲಿಕಾನ್ ಸಿಟಿಯಲ್ಲಿ ಮಳೆರಾಯ ಅಬ್ಬರಿಸತೊಡಗಿದ್ದಾನೆ. ದಿಢೀರ್ ಎಂದು ಸುರಿದ ಈ ಭಾರಿ ಮಳೆಯಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.
ನಗರದ ಹೃದಯಭಾಗವಾದ ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಟೌನ್ ಹಾಲ್, ಕಾರ್ಪೋರೇಶನ್, ಶಾಂತಿನಗರ, ವಸಂತನಗರ ಮತ್ತು ಸದಾಶಿವನಗರ ಸೇರಿದಂತೆ ಮಧ್ಯ ಬೆಂಗಳೂರಿನ ಬಹುತೇಕ ಪ್ರದೇಶಗಳು ಮಳೆಯಿಂದ ಸಂಪೂರ್ಣವಾಗಿ ತೊಯ್ದು ತೊಪ್ಪೆಯಾಗಿವೆ. ಮಳೆಯ ತೀವ್ರತೆಗೆ ರಸ್ತೆಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹೈರಾಣಾಗಿದ್ದಾರೆ.
ಮತ್ತೊಂದೆಡೆ ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ವಿಜಯನಗರ, ಸುಬ್ರಮಣ್ಯನಗರ, ನಾಗರಬಾವಿ, ಮೂಡಲಪಾಳ್ಯ ಹಾಗೂ ಲಗ್ಗೆರೆ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಬೆಂಗಳೂರಿನ ವಸತಿ ಪ್ರದೇಶಗಳಲ್ಲೂ ಬಿಡದೇ ಮಳೆ ಸುರಿದಿದೆ. ಹಲವು ಕಡೆಗಳಲ್ಲಿ ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಇದೇ ವೇಳೆ ದಕ್ಷಿಣ ಮತ್ತು ಈಶಾನ್ಯ ಬೆಂಗಳೂರಿನ ಭಾಗಗಳಾದ ಹೆಬ್ಬಾಳ, ಯಲಹಂಕ, ಗಿರಿನಗರ, ಬಸವನಗುಡಿ, ಜಯನಗರ, ಜೆ.ಪಿ ನಗರ, ಬನಶಂಕರಿ ಹಾಗೂ ಕೋಣನಕುಂಟೆ ವ್ಯಾಪ್ತಿಯಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಬಿರುಗಾಳಿಯ ತೀವ್ರತೆಗೆ ಕೆಲವು ಕಡೆ ಮರಗಳ ಕೊಂಬೆಗಳು ಮುರಿದು ಬಿದ್ದಿರುವ ವರದಿಯಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಇನ್ನು ಭಾರಿ ಮಳೆಯ ಹಿನ್ನೆಲೆಯಲ್ಲಿ ಅನಾಹುತಗಳನ್ನು ತಪ್ಪಿಸಲು ಬಿಬಿಎಂಪಿ ಮತ್ತು ಸಂಚಾರಿ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಬಾರಿ ಭಾರಿ ಮಳೆಗೆ ತುತ್ತಾಗಿದ್ದ ಪ್ರಮುಖ ಜಂಕ್ಷನ್ ಆದ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಅನ್ನು ಮುನ್ನೆಚ್ಚರಿಕೆಯಾಗಿ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿದೆ. ಬ್ಯಾರಿಕೇಡ್ಗಳನ್ನು ಹಾಕಿ ವಾಹನಗಳನ್ನು ಪರ್ಯಾಯ ಮಾರ್ಗಗಳತ್ತ ತಿರುಗಿಸಲಾಗುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.








