ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಈಗಾಗಲೇ ತೆರೆಮರೆಯಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಮಧುಗಿರಿ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ನೀಡಿರುವ ಜಿ. ಪರಮೇಶ್ವರ್ ಪರವಾದ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸ್ಥಾನ ಯಾರೊಬ್ಬರ ಸ್ವತ್ತಲ್ಲ ಎಂದು ಹೇಳುವ ಮೂಲಕ ರಾಜಣ್ಣ ಅವರು ಹೈಕಮಾಂಡ್ ಮಟ್ಟದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ತುಮಕೂರಿನ ಮಧುಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ, ಗೃಹ ಸಚಿವ ಜಿ. ಪರಮೇಶ್ವರ್ ಅವರ ಪರವಾಗಿ ಬಹಿರಂಗವಾಗಿಯೇ ಬ್ಯಾಟಿಂಗ್ ಮಾಡಿದರು. ರಾಜ್ಯದಲ್ಲಿ ಒಂದು ವೇಳೆ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆಯ ಸನ್ನಿವೇಶ ಎದುರಾದರೆ, ಆ ಸ್ಥಾನಕ್ಕೆ ಜಿ. ಪರಮೇಶ್ವರ್ ಅವರೇ ಸೂಕ್ತ ವ್ಯಕ್ತಿ ಮತ್ತು ಅವರೇ ಮುಖ್ಯಮಂತ್ರಿಯಾಗಬೇಕು ಎಂದು ತನು-ಮನ-ಧನದಿಂದ ಬೆಂಬಲಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧನಾ ಸಮಾವೇಶ ಆಯೋಜಿಸಲಾಗುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದ ರಾಜಣ್ಣ, “ಹೌದು, ನಾವು ಅದನ್ನೇ ಬಯಸುತ್ತೇವೆ” ಎಂದು ಒಪ್ಪಿಕೊಂಡರು. ಈ ಮೂಲಕ ಪರಮೇಶ್ವರ್ ಅವರನ್ನು ಮುಂದಿನ ಸಿಎಂ ರೇಸ್ನಲ್ಲಿ ಮುಂಚೂಣಿಗೆ ತರಲು ಒಂದು ಬಣ ಈಗಾಗಲೇ ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿರುವುದನ್ನು ಅವರು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
ಇದೇ ವೇಳೆ ಹಳೆಯ ರಾಜಕೀಯ ವಿದ್ಯಮಾನಗಳನ್ನು ನೆನಪಿಸಿದ ರಾಜಣ್ಣ, “ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಜಿ. ಪರಮೇಶ್ವರ್ ಅವರು ಗೆದ್ದಿದ್ದರೆ, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುತ್ತಿದ್ದರಾ?” ಎಂದು ಪ್ರಶ್ನಿಸುವ ಮೂಲಕ ಚರ್ಚೆಯನ್ನು ಮತ್ತಷ್ಟು ಕಾವೇರಿಸಿದರು. ಸಿಎಂ ಸ್ಥಾನ ಎಂಬುದು ಸಿದ್ದರಾಮಯ್ಯ ಅವರ ಮನೆ ಆಸ್ತಿಯಲ್ಲ ಮತ್ತು ಅದು ಯಾವುದೇ ರಾಜಕಾರಣಿಗಳ ಸ್ವಂತ ಆಸ್ತಿಯೂ ಅಲ್ಲ ಎಂದು ಅತ್ಯಂತ ಕಡಾಖಂಡಿತವಾಗಿ ನುಡಿದರು.
ಕೆ.ಎನ್. ರಾಜಣ್ಣ ಅವರ ಈ ಸ್ಫೋಟಕ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಸ್ಥಾನದ ಪೈಪೋಟಿಯ ಮಧ್ಯೆ, ಈಗ ಮೂರನೇ ಶಕ್ತಿಯಾಗಿ ಜಿ. ಪರಮೇಶ್ವರ್ ಅವರ ಹೆಸರು ಮುಂಚೂಣಿಗೆ ಬಂದಿರುವುದು ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.








