ಹೈದರಾಬಾದ್: ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಹಣ್ಣುಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವ್ಯಾಪಾರಿಗಳು ಕೃತಕ ರಸಾಯನಿಕ ಬಳಸಿ ಮಾಗಿಸಿದ ಮಾವಿನ ಹಣ್ಣನ್ನು ತಿಂದ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಕುಮ್ರಂ ಭೀಮ್ ಆಸಿಫಾಬಾದ್ ಜಿಲ್ಲೆಯ ದಹೇಗಾಂವ್ ಮಂಡಲದ ಲೋಹ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ಸಂಭವಿಸಿದೆ. 5 ವರ್ಷದ ಬಾಲಕ ಶ್ರೀವರ್ಧನ್ ಮೃತ ದುರ್ದೈವಿ. ಕೀರ್ತನಾ ಹಾಗೂ ಕೀರ್ತಿ ಕುಮಾರ್ ಎಂಬ ಮತ್ತಿಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆಯ ಹಿನ್ನೆಲೆ:
ಮೂಲಗಳ ಪ್ರಕಾರ, ಬೆಜ್ಜೂರು ಮಂಡಲದ ಕುಂಟಮಾನುಪಲ್ಲಿ ನಿವಾಸಿಗಳಾದ ಪೋರ್ತೆಟ್ಟಿ ಶಾರದಾ ಮತ್ತು ಶ್ರೀನಿವಾಸ್ ದಂಪತಿ ಕೂಲಿ ಕೆಲಸಕ್ಕಾಗಿ ಲೋಹ ಗ್ರಾಮಕ್ಕೆ ವಲಸೆ ಬಂದಿದ್ದರು. ಶನಿವಾರ ಶಾರದಾ ಅವರು ಗ್ರಾಮಸ್ಥರೊಂದಿಗೆ ಸೇರಿ ಬೀಡಿ ಎಲೆ ಸಂಗ್ರಹಿಸಲು ಹೋಗಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಸಂಜೆ ಸುಮಾರು 4 ಗಂಟೆಯ ವೇಳೆಗೆ ಮನೆಯಲ್ಲಿದ್ದ ಮೂವರು ಮಕ್ಕಳು ದಿಢೀರನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಮಕ್ಕಳನ್ನು ಕೊಂಚವೆಲ್ಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ, ಅವರನ್ನು ಮರಳಿ ಮನೆಗೆ ಕರೆತರಲಾಗಿತ್ತು.
ಮಧ್ಯರಾತ್ರಿ ಮರುಕಳಿಸಿದ ವಿಕೋಪ:
ಆದರೆ, ದುರದೃಷ್ಟವಶಾತ್ ಮಧ್ಯರಾತ್ರಿ ಮೂರೂ ಮಕ್ಕಳ ಆರೋಗ್ಯ ಮತ್ತೆ ಕ್ಷೀಣಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಸಿದ್ಧತೆ ನಡೆಸುವಷ್ಟರಲ್ಲೇ ಬಾಲಕ ಶ್ರೀವರ್ಧನ್ ಮನೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಉಳಿದ ಇಬ್ಬರು ಮಕ್ಕಳಾದ ಕೀರ್ತನಾ ಮತ್ತು ಕೀರ್ತಿ ಕುಮಾರ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ಮಂಚಿರ್ಯಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವಿಗೆ ನಿಖರ ಕಾರಣವೇನು?
ಮಕ್ಕಳ ದಿಢೀರ್ ಅಸ್ವಸ್ಥತೆಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಸಂತ್ರಸ್ತ ಕುಟುಂಬದ ಮನೆಯಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ (Calcium Carbide) ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದ್ದ ಮಾವಿನ ಹಣ್ಣುಗಳು ಪತ್ತೆಯಾಗಿವೆ.
ಶಂಕೆ 1: ಕೃತಕವಾಗಿ ಮಾಗಿಸಿದ ಈ ವಿಷಪೂರಿತ ಮಾವಿನ ಹಣ್ಣುಗಳನ್ನು ತಿಂದಿದ್ದರಿಂದಲೇ ಮಕ್ಕಳು ಫುಡ್ ಪಾಯಿಸನ್ ಆಗಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಶಂಕೆ 2: ಪ್ರಸ್ತುತ ದೇಶಾದ್ಯಂತ ಇರುವ ತೀವ್ರ ಬಿಸಿಲಿನ ತಾಪ ಹಾಗೂ ವಡದೆಬ್ಬಕ್ಕೆ (Heat Stroke) ತುತ್ತಾಗಿ ಹೀಗಾಗಿರಬಹುದೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಜ್ಞರ ಎಚ್ಚರಿಕೆ:
ಕೃತಕ ರಸಾಯನಿಕಗಳನ್ನು ಬಳಸಿ ಮಾಗಿಸುವ ಮಾವಿನ ಹಣ್ಣುಗಳು ನೇರವಾಗಿ ಲಿವರ್, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ರಾಸಾಯನಿಕಗಳ ಅತಿಯಾದ ಪ್ರಮಾಣವು ಕೆಲವು ಸಂದರ್ಭಗಳಲ್ಲಿ ಪ್ರಾಣಕ್ಕೇ ಕಂಟಕವಾಗಬಹುದು. ಹಣ್ಣುಗಳನ್ನು ಖರೀದಿಸುವಾಗ ಮತ್ತು ತಿನ್ನುವ ಮುನ್ನ ಸಾರ್ವಜನಿಕರು ಹಾಗೂ ಪೋಷಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.








