ಮಾಸ್ಕೋ:ರಷ್ಯಾದ ರಾಜಧಾನಿ ಮಾಸ್ಕೋ ರೀಜನ್ನಲ್ಲಿ ನಡೆದ ಭೀಕರ ಡ್ರೋನ್ ದಾಳಿಯಲ್ಲಿ ಭಾರತದ ಓರ್ವ ಕಾರ್ಮಿಕ ಮೃತಪಟ್ಟು, ಇತರ ಮೂವರು ಭಾರತೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ (Embassy of India) ಅಧಿಕೃತವಾಗಿ ಖಚಿತಪಡಿಸಿದೆ. ಉಕ್ರೇನ್ ನಡೆಸಿರುವ ಈ ಬೃಹತ್ ವೈಮಾನಿಕ ದಾಳಿಯಿಂದಾಗಿ ಮಾಸ್ಕೋ ತತ್ತರಿಸಿದೆ.
ಉಕ್ರೇನ್ ಪಡೆಗಳು ಮಾಸ್ಕೋ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನೂರಾರು ಡ್ರೋನ್ಗಳ ಮೂಲಕ ಸಾಮೂಹಿಕ ದಾಳಿ ನಡೆಸಿವೆ. ಈ ವೇಳೆ ಕಾರ್ಖಾನೆಯೊಂದರ ಆವರಣದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕರು ದಾಳಿಗೆ ಸಿಲುಕಿದ್ದಾರೆ. ಘಟನೆಯಲ್ಲಿ ಓರ್ವ ಭಾರತೀಯ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿರುವ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ತಕ್ಷಣವೇ ದಾಳಿ ನಡೆದ ಸ್ಥಳ ಹಾಗೂ ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
”ಡ್ರೋನ್ ದಾಳಿಯಲ್ಲಿ ಓರ್ವ ಭಾರತೀಯ ಕಾರ್ಮಿಕ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಮೃತರ ಕುಟುಂಬಕ್ಕೆ ನಮ್ಮ ಕಚೇರಿ ತೀವ್ರ ಸಂತಾಪ ಸೂಚಿಸುತ್ತದೆ. ಗಾಯಗೊಂಡಿರುವ ಭಾರತೀಯರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಕಂಪನಿಯ ಮ್ಯಾನೇಜ್ಮೆಂಟ್ ಹಾಗೂ ರಷ್ಯಾದ ಸ್ಥಳೀಯ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಮತ್ತು ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ,” ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.








