ಮೈಸೂರು :ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ‘ಜನರೊಂದಿಗೆ ಜನತಾದಳ ಸಮಾವೇಶ’ ಇದೀಗ ಬ್ಯಾನರ್ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್ ಹಮ್ಮಿಕೊಂಡಿರುವ ಈ ಬೃಹತ್ ಸಮಾವೇಶದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಂದ ಪಕ್ಷದ ಹಿರಿಯ ನಾಯಕ, ಶಾಸಕ ಜಿ.ಟಿ. ದೇವೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಭಾವಚಿತ್ರಗಳನ್ನು ಕೈಬಿಟ್ಟಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕ್ಷೇತ್ರದಾದ್ಯಂತ ರಾರಾಜಿಸುತ್ತಿರುವ ಈ ಸಮಾವೇಶದ ಫ್ಲೆಕ್ಸ್‌ಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ಫೋಟೋಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ, ಇದೇ ಕ್ಷೇತ್ರದ ಹಾಲಿ ಶಾಸಕರಾಗಿದ್ದೂ ಜಿ.ಟಿ. ದೇವೇಗೌಡ ಅವರ ಫೋಟೋ ಮಿಸ್ ಆಗಿರುವುದು ಸಾರ್ವಜನಿಕರಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಪುತ್ರನಿಗೆ ಮನ್ನಣೆ, ತಂದೆಗೆ ಕೊಕ್! ಇನ್ನು ಈ ಫ್ಲೆಕ್ಸ್ ರಾಜಕೀಯದಲ್ಲಿ ಮತ್ತೊಂದು ರೋಚಕ ತಿರುವು ಎಂದರೆ, ಜಿ.ಟಿ. ದೇವೇಗೌಡರ ಫೋಟೋಗೆ ಕೊಕ್ ನೀಡಲಾಗಿದ್ದರೂ, ಅವರ ಪುತ್ರ ಹಾಗೂ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಅವರ ಭಾವಚಿತ್ರ ಮಾತ್ರ ಬ್ಯಾನರ್‌ನಲ್ಲಿ ಎದ್ದು ಕಾಣುವಂತೆ ರಾರಾಜಿಸುತ್ತಿದೆ. ತಂದೆಯನ್ನು ಬದಿಗೆ ಸರಿಸಿ ಪುತ್ರನಿಗೆ ದೊಡ್ಡ ಮಟ್ಟದ ಹೈಲೈಟ್ ನೀಡಿರುವುದು ಪಕ್ಷದೊಳಗಿನ ಆಂತರಿಕ ಒಳಜಗಳ ಮತ್ತು ಮುಂದಿನ ರಾಜಕೀಯ ತಂತ್ರಗಾರಿಕೆಯನ್ನು ಬಿಂಬಿಸುವಂತಿದೆ.
ಹೆಚ್.ಡಿ. ರೇವಣ್ಣ ಚಿತ್ರವೂ ಗೈಬ್ ಜಿ.ಟಿ.ಡಿ ಮಾತ್ರವಲ್ಲದೆ, ಜೆಡಿಎಸ್‌ನ ಮತ್ತೊಬ್ಬ ಪ್ರಭಾವಿ ಹಿರಿಯ ನಾಯಕ ಹೆಚ್.ಡಿ. ರೇವಣ್ಣ ಅವರ ಫೋಟೋ ಕೂಡ ಈ ಬ್ಯಾನರ್‌ಗಳಿಂದ ಮಾಯವಾಗಿದೆ. ಪಕ್ಷದ ಪ್ರಮುಖ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ರೇವಣ್ಣ ಅವರನ್ನು ಈ ಸಮಾವೇಶದ ಪ್ರಚಾರದಿಂದ ದೂರ ಇಟ್ಟಿರುವುದು ಜೆಡಿಎಸ್ ವರಿಷ್ಠರ ನಡೆ ಹಾಗೂ ಕುಟುಂಬದೊಳಗಿನ ಆಂತರಿಕ ಸಮೀಕರಣಗಳ ಬದಲಾವಣೆಯ ಮುನ್ಸೂಚನೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಹೌದು ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಅನುಪಸ್ಥಿತಿಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಮಾತಾಡಿದ ಹೆಚ್‍ಡಿಕೆ, 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ನಮ್ಮ ಸಣ್ಣ ಪುಟ್ಟ ತಪ್ಪಿನಿಂದ ಜೆಡಿಎಸ್ ಸೋತಿತು. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದರೆ ಕರ್ನಾಟಕಕ್ಕೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಮಾಡಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿ ಕೆಲಸವನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನು ಮಾಡಿದ್ದೇನೆ. ಕುರುಬ ಸಮುದಾಯ ಜೆಡಿಎಸ್ ಜೊತೆ ಇದೆ ಎಂದು ಅರಿಶಿಣ ಬಣ್ಣದ ರುಮಾಲು ಧರಿಸಿದ್ದೇನೆ. ಕುರುಬ ಸಮುದಾಯ ತಮ್ಮನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದರು.








