ಹೈದರಾಬಾದ್:ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ (POCSO) ಪ್ರಕರಣ ಎದುರಿಸುತ್ತಿರುವ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಸಾಯಿ ಭಗೀರಥ್ ಶನಿವಾರ ರಾತ್ರಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ಭಗೀರಥ್ ಸಲ್ಲಿಸಿದ್ದ ನಿರಾಕ್ಷೇಪಣಾ ಜಾಮೀನು ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಸಚಿವ ಬಂಡಿ ಸಂಜಯ್
ಮಗನ ಶರಣಾಗತಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಬಂಡಿ ಸಂಜಯ್, “ಕಾನೂನು ಮತ್ತು ನ್ಯಾಯಾಂಗದ ಮೇಲಿನ ಅಪಾರ ಗೌರವದಿಂದಾಗಿ, ನನ್ನ ಮಗ ಬಂಡಿ ಭಗೀರಥ್ ಇಂದು ವಕೀಲರ ಮೂಲಕ ತನಿಖೆಗಾಗಿ ತೆಲಂಗಾಣ ಪೊಲೀಸರ ಮುಂದೆ ಹಾಜರಾಗಿದ್ದಾನೆ. ನನ್ನ ಮಗನಾಗಿರಲಿ ಅಥವಾ ಸಾಮಾನ್ಯ ನಾಗರಿಕನಾಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ಆತ ಯಾವುದೇ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾನೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ” ಎಂದು ಹೇಳಿದ್ದಾರೆ.
ಹೈಕೋರ್ಟ್ನಿಂದ ನಿರಾಕರಣೆ, ಲುಕ್ಔಟ್ ನೋಟಿಸ್ ಜಾರಿ
ಮೇ 8 ರಂದು ಹೈದರಾಬಾದ್ನ ಪೆಟ್ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಭಗೀರಥ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಆತನ ಪತ್ತೆಗಾಗಿ ಪೊಲೀಸರು ದಿಲ್ಲಿ, ಕರೀಂನಗರ ಸೇರಿದಂತೆ ಹಲವೆಡೆ ಹುಡುಕಾಟ ನಡೆಸಿದ್ದರು. ಅಲ್ಲದೆ ಆತ ದೇಶ ಬಿಟ್ಟು ಹೋಗದಂತೆ ತಡೆಯಲು ಸೈಬರಾಬಾದ್ ಪೊಲೀಸರು ‘ಲುಕ್ಔಟ್ ಸರ್ಕ್ಯುಲರ್’ (LOC) ಕೂಡ ಹೊರಡಿಸಿದ್ದರು. ಶುಕ್ರವಾರ ತಡರಾತ್ರಿ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಲು ನಿರಾಕರಿಸಿದ ಕಾರಣ, ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಭಗೀರಥ್ ಪೊಲೀಸರ ಮುಂದೆ ಹಾಜರಾಗಿದ್ದಾನೆ.








