ಬೆಂಗಳೂರು: ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಭರಪೂರ ಕೊಡುಗೆ ಸಿಕ್ಕಿದೆ. ಕರ್ನಾಟಕಕ್ಕೆ ಒಟ್ಟು 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ 550 ಪಿಜಿ (ಸ್ನಾತಕೋತ್ತರ) ಮತ್ತು 572 ಯುಜಿ (ಎಂಬಿಬಿಎಸ್) ಸೀಟುಗಳು ಸೇರಿವೆ.
ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು ಹಂಚಿಕೆಯಾಗಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.
ಮಂಜೂರಾಗಿರುವ ಹೆಚ್ಚುವರಿ ಸೀಟುಗಳಲ್ಲಿ ಬಹುಪಾಲು ಸೀಟುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೇ ಹಂಚಿಕೆ ಮಾಡಲಾಗಿದೆ.ಈ ಹೆಚ್ಚುವರಿ ಸೀಟುಗಳ ಹಂಚಿಕೆಯು ರಾಜ್ಯದಲ್ಲಿ ಹೊಸದಾಗಿ 10 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದಕ್ಕೆ ಸಮನಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
ವೈದ್ಯಕೀಯ ಮೂಲಸೌಕರ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರ ಒಟ್ಟು ₹1090 ಕೋಟಿ ಅಭಿವೃದ್ಧಿ ಅನುದಾನ ನೀಡುತ್ತಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ₹600 ಕೋಟಿಗೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲಿದೆ.
ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ಮಂಡ್ಯ, ಗದಗ, ಮಡಿಕೇರಿ, ಚಾಮರಾಜನಗರ, ಕಾರವಾರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಈ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.
ರಾಜ್ಯ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಈ ಸೀಟುಗಳು ಲಭ್ಯವಾಗಿವೆ. ಒಂದೇ ವರ್ಷದಲ್ಲಿ ಒಂದು ರಾಜ್ಯಕ್ಕೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟುಗಳು ದೊರೆತಿರುವುದು ಒಂದು ದಾಖಲೆಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ ವಿದ್ಯಾರ್ಥಿಗಳಿಗೆ ಇದು ವರವಾಗಲಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.








