ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ಕೈ ಬಿಡುವಂತೆ ಶಾಸಕ ಕೆ.ಎಂ.ಉದಯ್ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ರೈತಪರ ಹೋರಾಟಗಾರ್ತಿ ಸುನಂದ ಜಯರಾಮ್ ಅವರ ನೇತೃತ್ವದಲ್ಲಿ ಗ್ರಾಮದ ಪ್ರಮುಖ ಮುಖಂಡರು ಭೇಟಿ ಮಾಡಿ ಚರ್ಚಿಸಿದರು.
ಈ ವೇಳೆ ಸುನಂದ ಜಯರಾಮು ಮಾತನಾಡಿ, ಮದ್ದೂರು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನೀವು ನಿರೀಕ್ಷೆಗೂ ಮೀರಿ ಜನಪರವಾಗಿ ಕೆಲಸ ಮಾಡುತ್ತಿದ್ದೀರಿ. ಆದರೆ, ನಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡುವ ಜೊತೆಗೆ ಗ್ರಾಮವನ್ನಾಗಿಯೇ ಉಳಿಸಿಕೊಡಿ ಇದು ನಿಮ್ಮಿಂದಲ್ಲೆ ಸಾಧ್ಯವಿದೆ ಎಂದು ಒತ್ತಾಯಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಉದಯ್ 146 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯನ್ನು ಗ್ರಾಮಸ್ಥರು ನಡೆಸುತ್ತಿರುವುದು ನಿನಗೆ ತಿಳಿದ ವಿಷಯವಾಗಿದ್ದು, ಈ ಹಿಂದೆ ನಿಮ್ಮ ಗ್ರಾಮ ಪಂಚಾತಿಯಲ್ಲಿಯೇ ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸುವ ಸಂಬಂಧ ಅನುಮೋದಿಸಿ ಚುನಾಯಿತ ಪ್ರತಿನಿಧಿಗಳೇ ನಿರ್ಧಾರ ಕೈಗೊಂಡಿದ್ದಾರೆ. ಆದಾಗಿಯೂ ಸರ್ಕಾರದಿಂದ ರಾಜ್ಯ ಪತ್ರ ಬರುವ ಮೊದಲೇ ನನ್ನ ಗಮನಕ್ಕೆ ತರಬಹುದಾಗಿತ್ತು. ಇಷ್ಟಾಗಿಯೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಗೆಜ್ಜಲಗೆರೆ ಗ್ರಾಮವನ್ನು ನಗರಸಭೆಯಿಂದ ಕೈ ಬಿಡುವ ಸಂಬಂಧ ನನ್ನ ಬಳಿಯೇ ಚರ್ಚಿಸಿ ಬಹುದಿತ್ತು. ಆದರೆ, ಪ್ರತಿಭಟನೆಯನ್ನು ಉಗ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಿದ್ದಿರಿ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿ ಅದರಿಂದ ನನಗೇನು ಲಾಭವಿಲ್ಲ. ಆದರೆ ಈ ಸಂಬಂಧ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಆದರೂ ನಿಮ್ಮ ಪರವಾಗಿ ಸರ್ಕಾರದ ಮಟ್ಟದಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ನಿಮ್ಮ ಸಮ್ಮುಖದಲ್ಲಿಯೇ ಒಂದು ಸಭೆ ನಡೆಸಿ ಮಾತನಾಡುತ್ತೇನೆ. ಗೆಜ್ಜಲಗೆರೆಯನ್ನು ಗ್ರಾಮವಾಗಿಯೇ ಉಳಿದರು ಅಥವಾ ನಗರಸಭೆಗೆ ಸೇರ್ಪಡೆಯಾದರು ನಾನು ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೆ ಸಮಾಧಾನಗೊಂಡ ಗ್ರಾಮದ ಮುಖಂಡರು ನಮ್ಮ ಗೆಜ್ಜಲಗೆರೆ ಗ್ರಾಮವನ್ನು ಗ್ರಾಮವನ್ನಾಗಿಯೇ ಉಳಿಸುತ್ತೀರಿ ಎಂಬ ಭರವಸೆ ನಮಗಿದೆ, ಇದು ನಿಮ್ಮಿಂದ ಸಾಧ್ಯವಾಗಲಿದೆ ಅದಕ್ಕೆ ನಾವು ಈ ವಿಷಯದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿ ಅನಿರ್ಧಿಷ್ಟಾವಧಿ ಧರಣಿ ಮುಂದುವರೆಸುತ್ತೇವೆ ಎಂದು ಶಾಸಕ ಉದಯ್ ಅವರಿಗೆ ತಿಳಿಸಿದರು.
ಈ ವೇಳೆ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನವೀನ್, ಗ್ರಾಮದ ಮುಖಂಡರಾದ ಶಂಕರ್, ಲಿಂಗಪ್ಪಾಜಿ, ಲೋಕೇಶ್, ಚಂದ್ರಶೇಖರ್, ವಿನೋದ್ ಬಾಬು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








