ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) ಮುಂಬರುವ ಜುಲೈ 1 ರಿಂದ ಜಾರಿಗೆ ಬರುವಂತೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸಿದೆ. ಆದರೆ, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ (R3) ಯಾವುದೇ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೇ 15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸಿಬಿಎಸ್‌ಇ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE) 2023 ರ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು ಎಂದು ತಿಳಿಸಿದೆ.
ಸಿಬಿಎಸ್‌ಇ ಸುತ್ತೋಲೆಯ ಪ್ರಮುಖ ನಿರ್ದೇಶನಗಳು
”ಜುಲೈ 1, 2026 ರಿಂದ ಜಾರಿಗೆ ಬರುವಂತೆ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ (R1, R2, R3) ಅಧ್ಯಯನ ಕಡ್ಡಾಯವಾಗಿರುತ್ತದೆ. ಇದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು,” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, “ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೆಚ್ಚಿನ ಗಮನಹರಿಸಲು ಮತ್ತು ಅವರ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡಲು” 10ನೇ ತರಗತಿ ಮಟ್ಟದಲ್ಲಿ ಮೂರನೇ ಭಾಷೆಗೆ ಯಾವುದೇ ಬೋರ್ಡ್ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದು ಸಿಬಿಎಸ್‌ಇ ಹೇಳಿದೆ.
ಮೌಲ್ಯಮಾಪನ ಮತ್ತು ಅನುಷ್ಠಾನ
”ಮೂರನೇ ಭಾಷೆಯ (R3) ಎಲ್ಲಾ ಮೌಲ್ಯಮಾಪನಗಳು ಸಂಪೂರ್ಣವಾಗಿ ಶಾಲಾ ಮಟ್ಟದಲ್ಲೇ ಆಂತರಿಕವಾಗಿ ನಡೆಯಲಿವೆ. ವಿದ್ಯಾರ್ಥಿಗಳು ಈ ಭಾಷೆಯಲ್ಲಿ ತೋರಿದ ಪ್ರದರ್ಶನವನ್ನು ಸಿಬಿಎಸ್‌ಇ ನೀಡುವ ಅಂಕಪಟ್ಟಿಯಲ್ಲಿ (ಪ್ರಮಾಣಪತ್ರ) ದಾಖಲಿಸಲಾಗುತ್ತದೆ,” ಎಂದು ಮಂಡಳಿ ತಿಳಿಸಿದೆ. ಇದರೊಂದಿಗೆ, ಮೂರನೇ ಭಾಷೆಯ (R3) ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗದಂತೆ ತಡೆಯಲು ಬರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಆಯ್ಕೆ ಮಾಡಿಕೊಳ್ಳುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು ಎಂಬ ಷರತ್ತಿಗೆ ಒಳಪಟ್ಟು, ಸಿಬಿಎಸ್‌ಇ ವಿಷಯಗಳ ಪಟ್ಟಿಯಲ್ಲಿರುವ ಯಾವುದೇ ಭಾಷೆಯನ್ನು ನೀಡಲು ಶಾಲೆಗಳಿಗೆ ಮುಕ್ತ ಅವಕಾಶವಿದೆ. ಮೊದಲ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ ಮಾತ್ರ ವಿದೇಶಿ ಭಾಷೆಗಳನ್ನು ಮೂರನೇ ಭಾಷೆಯಾಗಿ ಕಲಿಯಬಹುದು, ಅಥವಾ ಐಚ್ಛಿಕವಾಗಿ ನಾಲ್ಕನೇ ಭಾಷೆಯಾಗಿ ಅಭ್ಯಸಿಸಬಹುದಾಗಿದೆ.
ಪರಿವರ್ತನಾ ಅವಧಿಯ ಕ್ರಮಗಳು
ಈ ಹೊಸ ಪದ್ಧತಿಗೆ ಹೊಂದಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದ ಪ್ರತ್ಯೇಕ ಪಠ್ಯಪುಸ್ತಕಗಳು ಲಭ್ಯವಾಗುವವರೆಗೆ, ಅವರು ಆಯ್ದುಕೊಂಡ ಮೂರನೇ ಭಾಷೆಗೆ ಸದ್ಯಕ್ಕೆ 6ನೇ ತರಗತಿಯ ಪಠ್ಯಪುಸ್ತಕಗಳನ್ನು ಬಳಸಬೇಕಾಗುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ. ಅಷ್ಟೇ ಅಲ್ಲದೆ, ಈ ಪಠ್ಯದ ಜೊತೆಗೆ ಸ್ಥಳೀಯ ಅಥವಾ ರಾಜ್ಯ ಮಟ್ಟದ ಸಾಹಿತ್ಯಿಕ ವಿಷಯಗಳನ್ನು ಸೇರ್ಪಡೆಗೊಳಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ.
ಅರ್ಹ ಭಾಷಾ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಶಾಲೆಗಳು, ತಾತ್ಕಾಲಿಕ ಕ್ರಮವಾಗಿ ಪರಸ್ಪರ ಶಾಲೆಗಳ ನಡುವೆ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು (inter-school resource sharing), ವರ್ಚುವಲ್ (ಆನ್‌ಲೈನ್) ಬೋಧನಾ ಸಹಾಯವನ್ನು ಪಡೆದುಕೊಳ್ಳುವುದು, ಅಥವಾ ನಿವೃತ್ತ ಶಿಕ್ಷಕರು ಮತ್ತು ಅರ್ಹ ಸ್ನಾತಕೋತ್ತರ ಪದವೀಧರರನ್ನು ನೇಮಿಸಿಕೊಳ್ಳುವಂತಹ ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.








