ಚೆನ್ನೈ: ಕಾಲಿವುಡ್‌ನ (ತಮಿಳು ಚಿತ್ರರಂಗ) ಖ್ಯಾತ ನಟ ಜಯಂ ರವಿ (ರವಿ ಮೋಹನ್) ತಮ್ಮ ವೈಯಕ್ತಿಕ ಜೀವನದ ಬಿಕ್ಕಟ್ಟು ಮತ್ತು ಪತ್ನಿ ಆರತಿ ರವಿ ಅವರೊಂದಿಗಿನ ವಿಚ್ಛೇದನ ಪ್ರಕರಣದ ಕುರಿತು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿ, ಭಾವುಕರಾಗಿದ್ದಾರೆ. ಚೆನ್ನೈನಲ್ಲಿ ಶನಿವಾರ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಅವರು, “ನನಗೆ ಅಧಿಕೃತವಾಗಿ ವಿಚ್ಛೇದನ ಸಿಗುವವರೆಗೂ ನಾನು ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ, ಹೊಸ ಚಿತ್ರಗಳನ್ನು ಬಿಡುಗಡೆಯೂ ಮಾಡುವುದಿಲ್ಲ” ಎಂದು ಘೋಷಿಸಿ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಸೌಮ್ಯ ಸ್ವಭಾವದವನು ಎಂದುಕೊಳ್ಳಬೇಡಿ, ಸಹನೆ ಮೀರಿದೆ!
ಪತ್ರಿಕಾಗೋಷ್ಠಿಯಲ್ಲಿ ಅತ್ಯಂತ ಭಾವುಕರಾಗಿ ಮತ್ತು ಆಕ್ರೋಶದಿಂದ ಮಾತನಾಡಿದ ಜಯಂ ರವಿ, “ಇಷ್ಟು ದಿನ ನನ್ನ ಮಕ್ಕಳಿಗಾಗಿ ಮತ್ತು ಕುಟುಂಬದ ಗೌರವಕ್ಕಾಗಿ ನಾನು ಸುಮ್ಮನಿದ್ದೆ. ಎಲ್ಲರೂ ನನ್ನನ್ನು ಸೌಮ್ಯ ಸ್ವಭಾವದವನು ಎಂದುಕೊಂಡಿದ್ದಾರೆ. ಆದರೆ ನನ್ನ ಮೌನವನ್ನೇ ನನ್ನ ದೌರ್ಬಲ್ಯ ಎಂದುಕೊಂಡು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸೈಬರ್ ಬುಲ್ಲಿಂಗ್ (ನಿಂದನೆ) ಮಾಡಲಾಗುತ್ತಿದೆ. ‘ಸಾಧು ಮಿರಂಡಾಲ್ ಕಾಡು ಕೊಳ್ಳಾದು’ (ಸಾಧು ಮುನಿದರೆ ಕಾಡು ಉಳಿಯದು) ಎಂಬ ತಮಿಳು ಗಾದೆಯಂತೆ ಈಗ ನನ್ನ ಸಹನೆ ಮೀರಿದೆ” ಎಂದು ಎಚ್ಚರಿಸಿದರು.
ಗುಲಾಮನಂತೆ ನಡೆಸಿಕೊಂಡರು, ಆತ್ಮಹತ್ಯೆಗೂ ಯತ್ನಿಸಿದ್ದೆ!
ತಮ್ಮ ವೈವಾಹಿಕ ಜೀವನದ ಕಹಿ ದಿನಗಳನ್ನು ನೆನೆದ ನಟ, “ನನ್ನನ್ನು ವರ್ಷಗಳ ಕಾಲ ಮನೆಯಲ್ಲಿ ಒಬ್ಬ ಗುಲಾಮನಂತೆ ನಡೆಸಿಕೊಳ್ಳಲಾಯಿತು. ನನ್ನದೇ ಆದ ಸ್ವಂತ ಬ್ಯಾಂಕ್ ಖಾತೆಯೂ ನನಗಿರಲಿಲ್ಲ. ನನ್ನ ಸಂಪಾದನೆಯನ್ನೆಲ್ಲ ಅವರೇ ನಿಯಂತ್ರಿಸುತ್ತಿದ್ದರು. ಈ ತೀವ್ರ ಮಾನಸಿಕ ಕಿರುಕುಳ ತಾಳಲಾರದೆ ನಾನು ಒಮ್ಮೆ ಕೈ ಮಣಿಕಟ್ಟು ಕುಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದೆ. ಆದರೂ ಮರುದಿನವೇ ನನ್ನ ವೃತ್ತಿಪರತೆಗೆ ಗೌರವ ಕೊಟ್ಟು ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಇಷ್ಟೆಲ್ಲಾ ಅನುಭವಿಸಿದ ನಾನು ಈಗ ಕೇವಲ ನನ್ನ ಬಟ್ಟೆಗಳನ್ನು ಮಾತ್ರ ತಗೆದುಕೊಂಡು ಆ ಮನೆಯಿಂದ ಹೊರಬಂದಿದ್ದೇನೆ” ಎಂದು ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟರು.
ಮಕ್ಕಳನ್ನು ನೋಡಲು ಬಿಡುತ್ತಿಲ್ಲ
ತಮ್ಮ ಮಕ್ಕಳ ಕುರಿತು ಮಾತನಾಡುತ್ತಾ ಕಣ್ಣೀರು ಹಾಕಿದ ಜಯಂ ರವಿ, “ನನ್ನ ಮಕ್ಕಳ ಭವಿಷ್ಯಕ್ಕಾಗಿ ನಾನು ವರ್ಷಕ್ಕೆ 50 ಲಕ್ಷ ರೂಪಾಯಿ ಸ್ಕೂಲ್ ಫೀಸ್ ಕಟ್ಟುತ್ತಿದ್ದೇನೆ. ಆದರೂ ನನ್ನ ಸ್ವಂತ ಮಕ್ಕಳನ್ನು ನೋಡಲು ನನಗೆ ಬಿಡುತ್ತಿಲ್ಲ. ಮಕ್ಕಳು ಸ್ಕೂಲ್‌ಗೆ ಹೋಗುವಾಗಲೂ ಅವರ ಜೊತೆ ಬಾಡಿಗಾರ್ಡ್‌ಗಳನ್ನು ಕಳುಹಿಸಿ ನನ್ನಿಂದ ದೂರ ಇಡಲಾಗುತ್ತಿದೆ. ತಂದೆಯಾಗಿ ನನ್ನ ಮಕ್ಕಳನ್ನು ನೋಡುವ ಹಕ್ಕನ್ನು ಕಸಿದುಕೊಳ್ಳಲಾಗಿದೆ” ಎಂದು ಅಳಲು ತೋಡಿಕೊಂಡರು.
ಆಪ್ತ ಗೆಳತಿ ಕೆನಿಶಾ ಪರ ಬ್ಯಾಟಿಂಗ್
ಗಾಯಕಿ ಮತ್ತು ಥೆರಪಿಸ್ಟ್ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸ್ನೇಹದ ಬಗ್ಗೆ ಕೇಳಿಬಂದಿರುವ ಅಪಪ್ರಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, “ಕೆನಿಶಾ ಅವರ ಮೇಲಿನ ಸೈಬರ್ ಟ್ರೋಲಿಂಗ್‌ನಿಂದಾಗಿ ಆಕೆ ಚೆನ್ನೈ ಬಿಟ್ಟು ಹೋಗುವಂತಾಯಿತು. ನಾನು ನೋಡದ ನಾಯಕಿಯರೇ ಇಲ್ಲ, ಅವರ ಜೊತೆಯೆಲ್ಲಾ ಇರದ ನಂಟು ಈಗ ಈಕೆಯೊಂದಿಗೆ ಮಾತ್ರ ಹೇಗೆ ಬರುತ್ತದೆ? ಆಕೆ ಎಲ್ಲಿದ್ದರೂ ಚೆನ್ನಾಗಿರಲಿ. ಆದರೆ ಆಕೆಯ ಹೆಸರನ್ನು ಕೆಡಿಸಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ” ಎಂದರು. ಅಲ್ಲದೆ, ಫೆಮಿನಿಸಂ (ಸ್ತ್ರೀವಾದ) ಹೆಸರಿನಲ್ಲಿ ಕೆಲವರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಪತ್ನಿ ಮತ್ತು ಅವರ ಕುಟುಂಬದ ವಿರುದ್ಧ ಕಿಡಿಕಾರಿದರು.
ಸದ್ಯ ಜಯಂ ರವಿ ಮತ್ತು ಆರತಿ ರವಿ ಅವರ ವಿಚ್ಛೇದನ ಪ್ರಕರಣವು ಚೆನ್ನೈ ಹೈಕೋರ್ಟ್‌ನಲ್ಲಿದ್ದು, ಈ ಪತ್ರಿಕಾಗೋಷ್ಠಿ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.








