ಬೆಂಗಳೂರು : ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮೇ 17ರಂದು ಸಂಚಾರ ವ್ಯತ್ಯಯ ಉಂಟಾಗಲಿದೆ. ಹೊಸಹಳ್ಳಿ-ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಒಟ್ಟು ಎರಡು ಗಂಟೆಗಳ ಅವಧಿಗೆ ಮೆಟ್ರೋ ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಯವುಂಟಾಗಲಿದೆ. ನೇರಳೆ ಮಾರ್ಗದ ಇತರ ಭಾಗಗಳು ಹಾಗೂ ಹಸಿರು, ಹಳದಿ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜಿನ ನಡುವೆ ನಾಳೆ ತುರ್ತು ಮತ್ತು ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯಲಿವೆ. ಈ ತಾಂತ್ರಿಕ ಕಾರಣದಿಂದಾಗಿ, ನಾಳೆ ಬೆಳಗ್ಗೆ 2 ಗಂಟೆಗಳ ಕಾಲ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಬೆಳಿಗ್ಗೆ 9 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚರಿಸಲಿವೆ.
ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ. ಜಿ. ರಸ್ತೆಯಿಂದ ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಸಂಚರಿಸಲಿವೆ. ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೂ ಹಳದಿ ಮಾರ್ಗದ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲುಗಳ ಸಂಚಾರ ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.








