ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಸೇತುವೆಯ ಮೇಲೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮುನಿರಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಮಿಳುನಾಡು ಮೂಲದ ಟ್ಯಾಂಕರ್ ಚಾಲಕನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆ ಸಂಭವಿಸಿದ ಈ ದುರಂತದಲ್ಲಿ ಒಂದು ವರ್ಷದ ಕಂದಮ್ಮ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದರು.
ರಾಷ್ಟ್ರೀಯ ಹೆದ್ದಾರಿ 50 ರ ತುಂಗಭದ್ರಾ ನದಿ ಸೇತುವೆಯ ಮೇಲೆ ಈ ಹೃದಯವಿದ್ರಾವಕ ಘಟನೆ ನಡೆದಿತ್ತು. ಹೊಸಪೇಟೆ ಕಡೆಯಿಂದ ಕೊಪ್ಪಳದತ್ತ ಬರುತ್ತಿದ್ದ ಟ್ರಾಕ್ಟರ್ಗೆ ತಮಿಳುನಾಡು ನೋಂದಣಿಯ ಹಾಲಿನ ಟ್ಯಾಂಕರ್ ಹಿಂಬದಿಯಿಂದ ಅತಿ ವೇಗವಾಗಿ ಬಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಟ್ರಾಕ್ಟರ್ ಸಂಪೂರ್ಣವಾಗಿ ಜಖಂಗೊಂಡು ಸೇತುವೆಯ ಮೇಲಿಂದ ಕೆಳಗೆ ಉರುಳಿ ಬಿದ್ದಿತ್ತು.
ಈ ಭೀಕರ ಅಪಘಾತದಲ್ಲಿ ಟ್ರಾಕ್ಟರ್ನಲ್ಲಿದ್ದ ಒಂದೇ ಕುಟುಂಬದ ಏಳು ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದರು. ಮೃತರಲ್ಲಿ ಒಂದು ವರ್ಷದ ಮಗು, ಇಬ್ಬರು ಮಹಿಳೆಯರು ಹಾಗೂ ನಾಲ್ಕು ಜನ ಪುರುಷರು ಸೇರಿದ್ದಾರೆ. ಗಾಯಗೊಂಡ ಇತರರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದನು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುನಿರಾಬಾದ್ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು. ಇದೀಗ ತಲೆಮರೆಸಿಕೊಂಡಿದ್ದ ತಮಿಳುನಾಡು ಮೂಲದ ಚಾಲಕನನ್ನು ಪತ್ತೆಹಚ್ಚಿ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ಬಂಧಿತ ಚಾಲಕನನ್ನು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಅಪಘಾತಕ್ಕೆ ಅತಿ ವೇಗದ ಚಾಲನೆಯೇ ಕಾರಣವೇ ಅಥವಾ ಚಾಲಕನ ಮದ್ಯಪಾನ ರೇಸ್ ಕಾರಣವೇ ಎಂಬ ಕೋನದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಒಂದೇ ಗ್ರಾಮದ ಒಂದೇ ಕುಟುಂಬದ 7 ಜನ ಸಾವನ್ನಪ್ಪಿರುವುದರಿಂದ ಹಿರೇಸಿಂದೋಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತರ ಆಕ್ರಂದನ ಮುಗಿಲು ಮುಟ್ಟಿದೆ.








