ಬೆಂಗಳೂರು: ಆನ್ಲೈನ್ ಗೇಮಿಂಗ್ ಸಂಸ್ಥೆಯಾದ ‘ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಬಿಗ್ ಶಾಕ್ ನೀಡಿದೆ. ಇತ್ತೀಚೆಗೆ ಕಂಪನಿಯ ಕಚೇರಿಗಳು ಹಾಗೂ ಅದರ ಪ್ರಮುಖ ನಿರ್ದೇಶಕರ ನಿವಾಸಗಳ ಮೇಲೆ ಸರಣಿ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮೂವರು ನಿರ್ದೇಶಕರನ್ನು ಅಧಿಕೃತವಾಗಿ ಬಂಧಿಸಿದ್ದಾರೆ. ಇದರೊಂದಿಗೆ ಸುಮಾರು 526.49 ಕೋಟಿ ರೂಪಾಯಿ ಮೌಲ್ಯದ ಚರಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ನಿರ್ದೇಶಕರು ಇ.ಡಿ. ವಶಕ್ಕೆ: ಈ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕರಾದ ಪೃಥ್ವಿ ರಾಜ್ ಸಿಂಗ್, ವಿಕಾಸ್ ತನೇಜಾ ಮತ್ತು ದೀಪಕ್ ಸಿಂಗ್ ಅಹ್ಲಾವತ್ ಎಂಬುವವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ನಿರ್ದೇಶಕರು ಕಂಪನಿಯ ಆರ್ಥಿಕ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಸದ್ಯ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ವಾರಗಳ ಕಾಲ ನಡೆದ ಸರಣಿ ಶೋಧ ಕಾರ್ಯ: ಮೇ 7ರಿಂದ ಮೇ 13ರವರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬೆಂಗಳೂರು ಸೇರಿದಂತೆ ವಿವಿಧೆಡೆ ಇರುವ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜೀಸ್ನ ಪ್ರಮುಖ ಕಚೇರಿಗಳು, ನಿರ್ದೇಶಕರು ಹಾಗೂ ಕಂಪನಿಯ ಉನ್ನತ ಅಧಿಕಾರಿಗಳ ನಿವಾಸಗಳ ಮೇಲೆ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಒಂದು ವಾರದ ಅವಧಿಯ ದಾಳಿಯ ಸಂದರ್ಭದಲ್ಲಿ ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋಟಿ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು: ದಾಳಿಯ ವೇಳೆ ಅಧಿಕಾರಿಗಳು ಭಾರಿ ಪ್ರಮಾಣದ ನಗದು ಹಾಗೂ ಆಭರಣಗಳನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 3.5 ಕೋಟಿ ರೂ. ಮೌಲ್ಯದ 2.5 ಕೆ.ಜಿ. ತೂಕದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ 11 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಡಿಜಿಟಲ್ ಸಾಕ್ಷ್ಯಗಳಾಗಿ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಸ್ಟಡಿಗೆ ಪಡೆಯಲಾಗಿದೆ.
ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್ಗಳು ಸ್ಥಗಿತ: ಕೇವಲ ನಗದು ಮತ್ತು ಚಿನ್ನಾಭರಣ ಮಾತ್ರವಲ್ಲದೆ, ಕಂಪನಿಗೆ ಸೇರಿದ ಕೋಟ್ಯಂತರ ರೂಪಾಯಿ ಹಣಕಾಸು ಹೂಡಿಕೆಗಳಿಗೂ ಇ.ಡಿ. ಬ್ರೇಕ್ ಹಾಕಿದೆ. ತನಿಖೆಯ ಭಾಗವಾಗಿ ಕಂಪನಿಯ ವಿವಿಧ ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್ವೇ ಬ್ಯಾಲೆನ್ಸ್ಗಳು, ಮ್ಯೂಚುವಲ್ ಫಂಡ್ಗಳು, ಬಾಂಡ್ಗಳು ಹಾಗೂ ಸ್ಥಿರ ಠೇವಣಿಗಳು (ಎಫ್.ಡಿ.) ಸೇರಿದಂತೆ ಒಟ್ಟು 526.49 ಕೋಟಿ ರೂ. ಮೌಲ್ಯದ ಚರ ಆಸ್ತಿಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡು, ಖಾತೆಗಳನ್ನು ಸ್ಥಗಿತಗೊಳಿಸಿದೆ (Freeze).
ED, Bengaluru Zonal Office, has conducted a Search operation at the office and residential premises of M/s. Gameskraft Technologies Pvt. Ltd., and its Directors & key employees, in Bengaluru and the NCR region, on 07/05/2026 to 13/05/2026 in the case of Rummyculture app. During… pic.twitter.com/Vj7XxsbBo4
— ED (@dir_ed) May 14, 2026








