ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ತೀವ್ರ ಏರುಪೇರು ಕಂಡುಬರುತ್ತಿದೆ. ಒಂದೆಡೆ ದಿಢೀರ್ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ತೀವ್ರತೆ ಮತ್ತು ಉಷ್ಣಾಂಶದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಠಾತ್ ಹವಾಮಾನ ಬದಲಾವಣೆಯು ಕೇವಲ ಮನುಷ್ಯರನ್ನು ಮಾತ್ರವಲ್ಲದೆ, ಮೂಕಪ್ರಾಣಿ ಮತ್ತು ಪಕ್ಷಿಗಳನ್ನು ಅಕ್ಷರಶಃ ಕಂಗಾಲಾಗಿಸಿದೆ.
ಕರಾವಳಿಯ ಧಗಧಗಿಸುವ ಸೆಕೆಗೆ ಬೀದಿಗಳಲ್ಲಿ ಅಲೆಯುವ ನೂರಾರು ಪ್ರಾಣಿಗಳು ತತ್ತರಿಸಿಹೋಗಿವೆ. ಗರಿಷ್ಠ ಉಷ್ಣಾಂಶದಲ್ಲಿ ಉಂಟಾಗಿರುವ ಭಾರಿ ಏರಿಕೆಯಿಂದಾಗಿ ಪ್ರಾಣಿ-ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ತೀವ್ರವಾಗಿ ಕಡಿಮೆಯಾಗುತ್ತಿದ್ದು, ‘ನಿರ್ಜಲೀಕರಣ’ (Dehydration) ಸಮಸ್ಯೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಸೂಕ್ತ ಆಶ್ರಯ ಮತ್ತು ಕುಡಿಯುವ ನೀರಿಲ್ಲದೆ ರಸ್ತೆ ಬದಿಗಳಲ್ಲಿ ಪ್ರಾಣಿಗಳು ಅಸ್ವಸ್ಥಗೊಂಡು ಬಿದ್ದಿರುವ ದೃಶ್ಯಗಳು ಕರಾವಳಿಯ ವಿವಿಧೆಡೆ ಸಾಮಾನ್ಯ ಎಂಬಂತಾಗಿದೆ.
ವಿಶೇಷವಾಗಿ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸದಾ ತಿರುಗಾಡುವ ಬೀಡಾಡಿ ದನಗಳು ಮತ್ತು ಬೀದಿ ನಾಯಿಗಳು ಈ ಕಡುಬಿಸಿಲಿನ ಹೊಡೆತಕ್ಕೆ ಸಿಲುಕಿ ತೀವ್ರವಾಗಿ ಬಸವಳಿಯುತ್ತಿವೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇವು ಮರಗಳ ನೆರಳು ಹಾಗೂ ಕಟ್ಟಡಗಳ ಆವರಣವನ್ನು ಹುಡುಕಿಕೊಂಡು ಆಶ್ರಯ ಪಡೆಯುತ್ತಿವೆ. ಇನ್ನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಾರಿವಾಳಗಳು, ಕಾಗೆಗಳು ಸೇರಿದಂತೆ ಇತರ ಸಣ್ಣಪುಟ್ಟ ಪಕ್ಷಿಗಳಿಗೂ ಕುಡಿಯುವ ನೀರಿನ ತತ್ವಾರ ಎದುರಾಗಿದ್ದು, ಹನಿ ನೀರಿಗಾಗಿ ಪರದಾಡುವಂತಾಗಿದೆ.
ಶ್ವಾನಗಳಿಗೆ ಹೀಟ್ ಸ್ಟೋಕ್
ಬಿಸಿಲು, ಸೆಕೆಯ ಪೆಟ್ಟು ಬೀದಿ ನಾಯಿಗಳ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ಕೆಲ ವಾರಗಳಿಂದ ಪ್ರಾಯಸ್ಥ ಶ್ವಾನಗಳು ಹೀಟ್ ಸ್ಟೋಕ್‌ಗೆ ಒಳಗಾಗುತ್ತಿದೆ. ಶಕ್ತಿನಗರದಲ್ಲಿರುವ ಅನಿಮಲ್ ಕೇರ್‌ನಲ್ಲೇ ಸುಮಾರು 20 ರಿಂದ 30 ಶ್ವಾನಗಳನ್ನು ಆರೈಕೆ ಮಾಡಲಾಗಿದೆ.
ಬಿಸಿಲಿನಿಂದಾಗಿ ಶ್ವಾನಗಳ ದೇಹದ ತಾಪಮಾನವೂ ಏರಿಕೆಯಾಗುತ್ತದೆ. ಇದರಿಂದಾಗಿ ನಾಯಿ ಸ್ಥಳದಲ್ಲೇ ಕುಸಿದು ಬಿದ್ದು, ಜೊಲ್ಲು ಸುರಿಸುತ್ತದೆ. ಇದೇ ಕಾರಣಕ್ಕೆ ನಾಲಗೆ ಹೊರಗೆ ಸರಿಸಿ ಜೊಲ್ಲು ಉಸಿರಾಡುತ್ತಾ ತಾಪ ಹೊರಹಾಕುತ್ತಿರುತ್ತದೆ. ಇನ್ನಷ್ಟು ತೀವ್ರಗೊಂಡರೆ ಶ್ವಾನಗಳು ಫಿಟ್ಸ್ಗೆ ಒಳಗಾಗಿ ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ಅನಿಮಲ್ ಕೇರ್‌ನ ಸುಮಾ ನಾಯಕ್.








