ಬೆಂಗಳೂರು: ಕರ್ನಾಟಕದಲ್ಲಿ ಮದ್ಯ ಮಾರಾಟವು ಈ ವರ್ಷ ದಾಖಲೆ ಮಟ್ಟವನ್ನು ತಲುಪಿದ್ದು, ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದುಬಂದಿದೆ. ಆದರೆ, ಈ ಆರ್ಥಿಕ ಲಾಭದ ಬೆನ್ನಲ್ಲೇ ಸಮಾಜದ ಕರಾಳ ಮುಖವೊಂದು ಅನಾವರಣಗೊಂಡಿದೆ. ಮದ್ಯದ ವ್ಯಸನದಿಂದಾಗಿ ಮಹಿಳೆಯರ ಮೇಲೆ ಪುರುಷರು ಎಸಗುತ್ತಿರುವ ದೈಹಿಕ ದೌರ್ಜನ್ಯಗಳ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದು ‘ಅಬಕಾರಿ ಸುಧಾರಣಾ-2026’ ವರದಿಯು ಆತಂಕಕಾರಿ ಅಂಶಗಳನ್ನು ಹೊರಹಾಕಿದೆ.
ಅಬಕಾರಿ ಇಲಾಖೆಯ ಸುಧಾರಣಾ ವರದಿಯ ಪ್ರಕಾರ, ಮದ್ಯಪಾನದ ಚಟವು ಕೇವಲ ವ್ಯಕ್ತಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ, ಕೌಟುಂಬಿಕ ಶಾಂತಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಕುಡಿತದ ಚಟವಿಲ್ಲದ ವಿವಾಹಿತ ಪುರುಷರಿಗೆ ಹೋಲಿಸಿದರೆ, ಮದ್ಯವ್ಯಸನಿಗಳು ತಮ್ಮ ಪತ್ನಿ ಹಾಗೂ ಕುಟುಂಬದ ಇತರೆ ಮಹಿಳಾ ಸದಸ್ಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸುತ್ತಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ.
ವರದಿಯಲ್ಲಿನ ಅಂಕಿಅಂಶಗಳು ಅತ್ಯಂತ ಭಯಾನಕವಾಗಿದ್ದು, ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುವ ಪತಿಯಂದಿರ ಪೈಕಿ ಶೇ. 71ರಷ್ಟು ಮಂದಿ ತಮ್ಮ ಪತ್ನಿಯರ ಮೇಲೆ ಹಲ್ಲೆ ಅಥವಾ ದೌರ್ಜನ್ಯ ಎಸಗುತ್ತಿದ್ದಾರೆ. ಈ ಗುಂಪಿನಲ್ಲಿ ದೌರ್ಜನ್ಯದ ತೀವ್ರತೆ ಹೆಚ್ಚಾಗಿದ್ದು, ಮದ್ಯವು ಕೌಟುಂಬಿಕ ಹಿಂಸಾಚಾರಕ್ಕೆ ನೇರ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಇನ್ನು ಸಾಂದರ್ಭಿಕವಾಗಿ ಮದ್ಯ ಸೇವಿಸುವ ಪುರುಷರಲ್ಲಿ ಈ ಪ್ರಮಾಣವು ಶೇ. 46ರಷ್ಟಿದೆ. ಅಚ್ಚರಿಯ ಸಂಗತಿಯೆಂದರೆ, ಮದ್ಯದ ವ್ಯಸನವಿದ್ದರೂ ಸಹ ಮನೆಯ ಹೊರಗಡೆ ಕುಡಿದು, ಮನೆಗೆ ಬರುವಾಗ ಮದ್ಯ ಸೇವಿಸದ ಪುರುಷರಲ್ಲಿಯೂ ಶೇ. 33ರಷ್ಟು ಮಂದಿ ಪತ್ನಿಯರನ್ನು ಹಿಂಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಂದರೆ ವ್ಯಸನವು ಯಾವುದೇ ರೂಪದಲ್ಲಿದ್ದರೂ ಅದು ಮಹಿಳೆಯರ ಸುರಕ್ಷತೆಗೆ ಮಾರಕವಾಗಿ ಪರಿಣಮಿಸುತ್ತಿದೆ.
ಕುಡಿತದ ಚಟವಿಲ್ಲದ ವಿವಾಹಿತ ಪುರುಷರಿಗಿಂತ ಮದ್ಯವ್ಯಸನಿಗಳು, ಪತ್ನಿ ಸೇರಿದಂತೆ ಕುಟುಂಬದ ಮಹಿಳಾ ಸದಸ್ಯರ ಮೇಲೆ ಹೆಚ್ಚು ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುವ ಪತಿಯಂದಿರ ಪೈಕಿ ಶೇ.71ರಷ್ಟು ಮಂದಿ ಪತ್ನಿಯರ ಮೇಲೆ ಹೆಚ್ಚು ದೌರ್ಜನ್ಯ ಎಸಗುತ್ತಿದ್ದಾರೆ. ಸಾಂದರ್ಭಿಕವಾಗಿ ಮದ್ಯ ಸೇವಿಸುವ ಪುರುಷರಲ್ಲಿ ಶೇ.46ರಷ್ಟು, ಕುಡಿತದ ವ್ಯಸನವಿದ್ದರೂ ಮನೆಗೆ ಮದ್ಯ ಸೇವಿಸಿ ಬಾರದ ಪುರುಷರಲ್ಲಿ ಶೇ.33ರಷ್ಟು ಮಂದಿ ಪತ್ನಿಯರನ್ನು ಹಿಂಸಿಸುತ್ತಿದ್ದಾರೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.11ರಷ್ಟು ಮಂದಿ ಮದ್ಯ ಸೇವಿಸುತ್ತಾರೆ. ಇದು ರಾಷ್ಟ್ರೀಯ ಸರಾಸರಿಗೆ (ಶೇ.14.6) ಹೋಲಿಸಿದರೆ, ಕಡಿಮೆ ಇದೆ. ಅಬಕಾರಿ ತೆರಿಗೆಯು ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಎಸ್ಡಿಪಿ) ಶೇ.1.4ರಷ್ಟು, ಒಟ್ಟು ತೆರಿಗೆ ಆದಾಯಕ್ಕೆ ಶೇ.11ರಷ್ಟು ಮತ್ತು ಸ್ವಂತ ತೆರಿಗೆಗೆ ಶೇ.20.3ರಷ್ಟು (2024-25) ಕೊಡುಗೆ ನೀಡುತ್ತಿದೆ. ದೇಶದಲ್ಲಿ ಮಾರಾಟವಾಗುವ ಒಟ್ಟು ಮದ್ಯದಲ್ಲಿ ಶೇ. 45ರಷ್ಟು ಪಾಲು ಹೊಂದಿರುವ ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು.
ರಾಜ್ಯದಲ್ಲಿ 15ರಿಂದ 49 ವರ್ಷದೊಳಗಿನ ಪುರುಷರಲ್ಲಿ ಸುಮಾರು ಶೇ.16.5ರಷ್ಟು ಮಂದಿ ಮದ್ಯ ಸೇವಿಸುತ್ತಿದ್ದಾರೆ ಹಾಗೂ ಸುಮಾರು ಶೇ.0.9ರಷ್ಟು ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ. ಮದ್ಯಪಾನದಿಂದ ಉಂಟಾಗುವ ಸಾಮಾಜಿಕ ವೆಚ್ಚವು ರಾಜ್ಯದ ಒಟ್ಟು ಜಿಡಿಪಿಯ ಸುಮಾರು ಶೇ.2.0ರಷ್ಟಿದೆ (ಅಂದರೆ ಸುಮಾರು 51 ಸಾವಿರ ಕೋಟಿ ರೂ.) ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.








