ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಗುಡುಗು ಸಹಿತ ಜೋರು ಮಳೆ, ಮತ್ತೊಂದು ಭಾಗದಲ್ಲಿ ಉರಿಬಿಸಿಲಿನ ಪ್ರಮಾಣ ಹೆಚ್ಚಾಗುವ ಮುನ್ನೆಚ್ಚರಿಕೆ ಕೊಡಲಾಗಿದೆ. ಮುಂದಿನ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ವಾತಾವರಣದಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಆಗಲಿದ್ದು, ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಸೃಷ್ಟಿಯಾದ ಚಂಡಮಾರುತ ಪರಿಚಲನೆ ಮತ್ತು ಇತರ ಕಡೆಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯಗಳು ಕಾರಣವೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮೇ 17ರವರೆಗೆ ಮಳೆ ಹಾಗೂ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ 65-115 ಮಿಲಿ ಮೀಟರ್ ವರೆಗೆ ಮಳೆ ಬರುವ ಕಾರಣಕ್ಕೆ ಮೇ 15, 16ರಂದು ಯೆಲ್ಲೋ ಅಟರ್ಲ್ ನೀಡಲಾಗಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮುಂಗಾರು ಮಳೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಿದೆ ಅಂದರೆ ಹೆಚ್ಚಿನ ಪ್ರದೇಶದಲ್ಲಿ ಮಳೆ ಹಂತ ಹಂತವಾಗಿ ಸುರಿಯುವ ಸಾಧ್ಯತೆ ಇದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಟ್ರಫ್ ಉಂಟಾಗಿದ್ದು, ಕಡಿಮೆ ಒತ್ತಡದ ಪ್ರದೇಶದ ಮಧ್ಯಭಾಗದಿಂದ ಉತ್ತರ ಶ್ರೀಲಂಕಾ ಕರಾವಳಿಯಿಂದ ಲಕ್ಷದ್ವೀಪ ಮತ್ತು ತಮಿಳುನಾಡಿನಾದ್ಯಂತ ವಿಸ್ತರಿಸಿದೆ. ಇದು ಸಮುದ್ರ ಮಟ್ಟದಿಂದ 1.5 ಮತ್ತು 4.5 ಕಿ.ಮೀ ಎತ್ತರದಲ್ಲಿ ಚಲಿಸುತ್ತಿದೆ. ಕೇರಳ ಕರಾವಳಿಯಲ್ಲೂ ಸಹ 0.9 ಕಿ.ಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಟ್ರಫ್, ಚಂಡಮಾರುತದ ಪರಿಚಲನೆಯ ಬಿರುಗಾಳಿ ಕರ್ನಾಟಕದ ಕರಾವಳಿ ಭಾಗದತ್ತ ಚಲಿಸಲಿದೆ ಎಂದು ಐಎಂಡಿ ವಿಜ್ಞಾನಿಗಳು ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.
ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು, ಮಂಡ್ಯ, ರಾಮನಗರ, ಚಾಮರಾಜನಗರ ಹೀಗೆ ವಿವಿಧೆಡೆ ಗಂಟೆಗೆ 40 ಕಿಮಿ ವೇಗದ ಗಾಳಿ, ಗುಡುಗು ಸಹಿತ ಮಳೆ ಸಂಭವವಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆ ಆಗಬಹುದು. ಚಂಡಮಾರುತ ಪರಿಚಲನೆ ತೀವ್ರಗೊಂಡಲ್ಲಿ ಇನ್ನೆರಡು ದಿನಗಳಲ್ಲಿ ಕರಾವಳಿ ಭಾಗಕ್ಕೆ ಹೆಚ್ಚಿನ ಮಳೆ ನಿರೀಕ್ಷೆ ಇದೆ.








