ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸರಣಿ ಕಳ್ಳತನ ಮಾಡಿ, ಸಾರ್ವಜನಿಕರ ನಿದ್ದೆಗೆಡಿಸಿದ್ದ ಇಬ್ಬರು ಅಂತರ ಜಿಲ್ಲಾ ಮನೆಗಳ್ಳರನ್ನು ಹಗರಿಬೊಮ್ಮನಹಳ್ಳಿ ಪೊಲೀಸರು ಸೋಮವಾರ ಬಂಧಿಸಿದ್ದು, ಬಂಧಿತರಿಂದ 14.06 ಲಕ್ಷ ರೂ. ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಕುಮಾರನಹಳ್ಳಿ ಆನಂದ (24) ಹಾಗೂ ಅರಳೇಹಳ್ಳಿಯ ಜಹಾಂಗೀರ್ ಭಾಷಾ (36) ಎಂದು ಗುರುತಿಸಲಾಗಿದೆ. ಈ ಪೈಕಿ ಜಹಾಂಗೀರ್ ಭಾಷಾ ಎಂಬಾತ ಹಳೆಯ ಅಪರಾಧಿಯಾಗಿದ್ದು, ಈ ಹಿಂದೆ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಹಾಗೂ ಅರಸೀಕೆರೆ ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳ್ಳತನ ಮತ್ತು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಮಾಹಿತಿ ನೀಡಿದರು.
ಕಳುವಾಗಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಆಭರಣಗಳ ಮೌಲ್ಯ 14.06 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ, ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು, ತಂಬ್ರಹಳ್ಳಿ ಪೊಲೀಸ್ ಠಾಣೆಯ 23/2026ನೇ ಕೇಸು ಮತ್ತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ 62/2026ನೇ ಕೇಸು ಸೇರಿದಂತೆ ಒಟ್ಟು ನಾಲ್ಕು ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ.
ಬಂಧಿತ ಆರೋಪಿಗಳ ವಿಚಾರಣೆಯಿಂದ ಹಗರಿಬೊಮ್ಮನಹಳ್ಳಿ ಠಾಣೆಯ 2, ತಂಬ್ರಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 4 ಪ್ರಮುಖ ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ 96.54 ಗ್ರಾಂ ಚಿನ್ನಾಭರಣ (ಮೌಲ್ಯ 12.56 ಲಕ್ಷ ರೂ.) ಹಾಗೂ 750 ಗ್ರಾಂ ಬೆಳ್ಳಿ (ಮೌಲ್ಯ 1.50 ಲಕ್ಷ ರೂ.) ವಶಕ್ಕೆ ಪಡೆಯಲಾಗಿದೆ.






