ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ (Trade War) ಜಾಗತಿಕ ಆರ್ಥಿಕತೆಯ ಮೇಲೆ ಆತಂಕ ಮೂಡಿಸಿರುವ ಈ ಹೊತ್ತಿನಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ಚೀನಾ ಪ್ರವಾಸ ಭಾರೀ ಕುತೂಹಲ ಕೆರಳಿಸಿದೆ. ವಿಶೇಷವೆಂದರೆ, ಈ ಪ್ರವಾಸದಲ್ಲಿ ಟ್ರಂಪ್ ಅವರೊಂದಿಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಆಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಪ್ರಮುಖ ಟೆಕ್ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕವು ಚೀನಾದ ಉತ್ಪನ್ನಗಳ ಮೇಲೆ ಹೇರಿರುವ ಭಾರಿ ಸುಂಕ ಮತ್ತು ಅದಕ್ಕೆ ಪ್ರತಿಯಾಗಿ ಚೀನಾ ಕೈಗೊಂಡಿರುವ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ.ಆಪಲ್ ಮತ್ತು ಟೆಸ್ಲಾದಂತಹ ಕಂಪನಿಗಳಿಗೆ ಚೀನಾ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಬಗೆಹರಿಸಲು ಈ ಉದ್ಯಮಿಗಳು ನೇರವಾಗಿ ಚೀನಾ ಸರ್ಕಾರದೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.
ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್‌ಗಳ ರಫ್ತಿನ ಮೇಲೆ ಹೇರಲಾದ ನಿರ್ಬಂಧಗಳ ನಡುವೆಯೂ, ಉಭಯ ರಾಷ್ಟ್ರಗಳ ನಡುವೆ ಸಾಧ್ಯವಿರುವ ಸಹಕಾರದ ಬಗ್ಗೆ ಈ ಭೇಟಿ ಬೆಳಕು ಚೆಲ್ಲಲಿದೆ.
ಚೀನಾದಲ್ಲಿ ಟೆಸ್ಲಾದ ಬೃಹತ್ ಮಾರುಕಟ್ಟೆ ಮತ್ತು ಉತ್ಪಾದನಾ ಘಟಕಗಳಿವೆ. ಅಲ್ಲದೆ, ಮಸ್ಕ್ ಅವರು ಟ್ರಂಪ್ ಅವರ ಆರ್ಥಿಕ ಸಲಹೆಗಾರರಾಗಿ ಪ್ರಭಾವಶಾಲಿ ಪಾತ್ರ ವಹಿಸುತ್ತಿರುವುದು ಈ ಭೇಟಿಗೆ ಹೆಚ್ಚಿನ ಮಹತ್ವ ತಂದಿದೆ.
ಆಪಲ್‌ನ ಬಹುತೇಕ ಉತ್ಪನ್ನಗಳ ಉತ್ಪಾದನೆ ಚೀನಾದಲ್ಲೇ ನಡೆಯುತ್ತಿದೆ. ಪೂರೈಕೆ ಸರಪಳಿಯನ್ನು (Supply Chain) ಉಳಿಸಿಕೊಳ್ಳಲು ಮತ್ತು ಚೀನಾದಲ್ಲಿ ಐಫೋನ್ ಮಾರಾಟ ಹೆಚ್ಚಿಸಲು ಕುಕ್ ಅವರ ಉಪಸ್ಥಿತಿ ನಿರ್ಣಾಯಕವಾಗಿದೆ.








