ಏಲೂರು: ತಂದೆ ಬೆಳ್ಳಗಿದ್ದರೆ ಮಗು ಕೂಡ ಬೆಳ್ಳಗಿರಬೇಕು, ತಾಯಿ ಕಪ್ಪಗಿದ್ದರೆ ಮಗು ಕಪ್ಪಗಿರಬೇಕು ಎಂಬ ಯಾವುದೇ ನಿಯಮ ಪ್ರಕೃತಿಯಲ್ಲಿಲ್ಲ. ಆದರೆ, ಕೇವಲ ಮಗುವಿನ ಚರ್ಮದ ಬಣ್ಣವನ್ನು ನೋಡಿ, “ಇವನು ನನ್ನ ಮಗನಲ್ಲ” ಎಂದು ಅನುಮಾನಿಸಿ, ಹೆತ್ತ ಮಗನನ್ನೇ ತಂದೆಯೊಬ್ಬ ಬಲಿಪಡೆದಿರುವ ಘೋರ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಪೆದಪಾಡು ಮಂಡಲದ ನಾಯುಡುಗುಡೆಂನಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ನಾಯುಡುಗುಡೆಂ ನಿವಾಸಿ ಪಿಟ್ಟಾ ವಿನೋದ್ ಮತ್ತು ಪೆದಪಾಡು ಮೂಲದ ಮಹಿಳೆಯೊಂದಿಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರಿಗೆ 11 ವರ್ಷದ ರಿಷಿಬಾಬು ಎಂಬ ಮಗನಿದ್ದನು. ಆದರೆ, ಮಗು ಹುಟ್ಟಿದಾಗಿನಿಂದಲೂ ವಿನೋದ್ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದನು. ಮಗುವಿನ ಬಣ್ಣ ಮತ್ತು ರೂಪ ತನ್ನಂತೆ ಇಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ, “ಇವನು ನನಗೆ ಹುಟ್ಟಿದ ಮಗನಲ್ಲ” ಎಂದು ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದನು.
ಒಂಬತ್ತು ವರ್ಷಗಳ ಹಿಂದೆ ಗಂಡನ ಕಿರುಕುಳ ತಾಳಲಾರದೆ ಆಕೆ ಮಗನನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದಳು. ಆದರೆ, 2024ರಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯಿತಿಯ ನಂತರ, ಪತಿ ಬದಲಾಗಿದ್ದಾನೆ ಎಂದು ನಂಬಿ ಆಕೆ ಮತ್ತೆ ಗಂಡನ ಮನೆಗೆ ಮರಳಿದ್ದಳು.
ಮಿತಿಮೀರಿದ ಕಿರುಕುಳ:
ಮನೆಗೆ ಬಂದ ಮೇಲೂ ವಿನೋದ್ನ ವಿಕೃತ ಬುದ್ಧಿ ಬದಲಾಗಲಿಲ್ಲ. ಮಗನನ್ನು ಶಾಲೆಗೆ ಕಳುಹಿಸದೆ, ದಿನನಿತ್ಯ ಆತನ ಮೇಲೆ ಹಲ್ಲೆ ಮಾಡುತ್ತಿದ್ದನು. ಈ ಬಗ್ಗೆ ಹಿಂದೆ ಐಸಿಡಿಎಸ್ (ICDS) ಅಧಿಕಾರಿಗಳು ವಿನೋದ್ಗೆ ಕೌನ್ಸೆಲಿಂಗ್ ನೀಡಿದ್ದರೂ ಆತ ಸುಧಾರಿಸಿರಲಿಲ್ಲ. ಮಗನ ಮೇಲೆ ಮತ್ತಷ್ಟು ದ್ವೇಷ ಸಾಧಿಸಲು ಶುರುಮಾಡಿದ್ದನು.
ಶನಿವಾರ ಬೆಳಿಗ್ಗೆ ಬಾಲಕನ ಅಜ್ಜ ರಮೇಶ್ ಅವರಿಗೆ ಸ್ಥಳೀಯರಿಂದ ಕರೆ ಬಂದಿದೆ. ರಿಷಿಬಾಬು ಮನೆಯ ಹೊರಗಿನ ಮಂಚದ ಮೇಲೆ ಶವವಾಗಿ ಬಿದ್ದಿರುವ ಮಾಹಿತಿ ತಿಳಿದು ಅವರು ಧಾವಿಸಿ ಬಂದಿದ್ದಾರೆ. ಬಾಲಕನ ದೇಹದ ಮೇಲೆ ಗಾಯದ ಗುರುತುಗಳಿದ್ದು, ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸ್ ತನಿಖೆ:
ಮೃತನ ಅಜ್ಜ ನೀಡಿದ ದೂರಿನ ಮೇರೆಗೆ ಪೆದಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನೋದ್ನನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮಗುವಿನ ಸಾವಿನ ಹಿಂದಿನ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.








