ಚೈನ್ನೈ : ತಮಿಳುನಾಡಿನ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಪದಗ್ರಹಣ ಮಾಡಿದ್ದಾಯ್ತು. ಇದೀಗ ರಾಜಕೀಯದಲ್ಲಿ ವಿಜಯ್ ಪರ್ವ ಶುರುವಾಗಿದೆ. ಹಾಗಂತ ಸಿನಿಮಾ ಫ್ಯಾನ್ಸ್‌ಗೆ ನಿರಾಸೆ ಮಾಡುತ್ತಿಲ್ಲ ವಿಜಯ್. ಇದೀಗ ʼಜನನಾಯಗನ್ʼ ಚಿತ್ರ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮೂಲಕ ಮತ್ತೊಂದ್ ಮಾಸ್ ವಿಜಯೋತ್ಸವಕ್ಕೆ ಫ್ಯಾನ್ಸ್ ಸಜ್ಜಾಗುತ್ತಿದ್ದಾರೆ.
ಹೌದು ಶೀಘ್ರದಲ್ಲೇ ವಿಜಯ್ ಕಟ್ಟ ಕಡೆಯ ಚಿತ್ರ ಎಂದು ಘೋಷಿಸಿರುವ ಜನನಾಯಗನ್ ಚಿತ್ರ ರಿಲೀಸ್ ಆಗಲಿದೆ. ಕಳೆದ ಜನವರಿ 9 ರಂದೇ ಚಿತ್ರ ತೆರೆಕಾಣಬೇಕಿತ್ತು. ಆದರೆ ಈ ಚಿತ್ರವು ಜನರ ಮೇಲೆ ಪ್ರಭಾವ ಬೀರಿ ವಿಜಯ್‌ಗೆ ಪ್ಲಸ್ ಆಗಬಹುದು ಅನ್ನೋ ಕಾರಣಕ್ಕೆ ಹಿಂದಿನ ಸರ್ಕಾರದ ಕೈವಾಡದಲ್ಲಿ ಸೆನ್ಸಾರ್ ಆಗದೆ ಉಳಿದಿತ್ತು. ಹಲವು ಬಾರಿ ಸೆನ್ಸಾರ್ ಮಂಡಳಿ ಕದ ತಟ್ಟಿದ್ದರೂ ಕಾರಣಗಳನ್ನ ಕೊಟ್ಟು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಇದುವರೆಗೂ ಜನನಾಯಗನ್ ಸೆನ್ಸಾರ್ ಆಗಿಲ್ಲ. ಆದರೆ ಇದೀಗ ವಿಜಯ್ ಸರ್ಕಾರವೇ ರಚನೆ ಆಗಿದೆ.
ವಿಜಯ್ ಕೊನೆಯ ಚಿತ್ರ ಜನನಾಯಗನ್‌ಗೆ ಎದುರಾಗಿದ್ದ ವಿಘ್ನಗಳು ಅಷ್ಟಿಷ್ಟಾಗಿರಲಿಲ್ಲ. ಡಿಸ್ಟ್ರಿಬ್ಯೂಷನ್ ಹಕ್ಕುಗಳು ಸೇಲ್ ಆಗಿತ್ತು, ಓಟಿಟಿ ರೈಟ್ಸ್ ಕೂಡ ಆಗಿತ್ತು, ಹೀಗಿದ್ರೂ ಸಿನಿಮಾ ರಿಲೀಸ್ ಆಗದೆ ಉಳಿದುಬಿಟ್ಟಿತು. ಎಲೆಕ್ಷನ್‌ಗೂ ಮುನ್ನ ರಿಲೀಸ್ ಮಾಡಬೇಕು ಅನ್ನೋದು ಚಿತ್ರತಂಡ ಹಾಗೂ ವಿಜಯ್ ಪ್ಲ್ಯಾನ್ ಆಗಿತ್ತು. ಆದರೆ ರಾಜಕೀಯ ವಿಡಂಬನೆ, ನಾಯಕತ್ವ ಒಳಗೊಂಡ ಕಥೆಯ ಆಳ ಅರಿತ ಹಿಂದಿನ ಸರ್ಕಾರವೇ ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡಿದೆ ಎನ್ನಲಾಗಿತ್ತು.
ಈ ನಡುವೆ ಸಿನಿಮಾವನ್ನೂ ಲೀಕ್ ಮಾಡಲಾಯಿತು. ಇಷ್ಟೆಲ್ಲಾ ಆದಮೇಲೂ ಫ್ಯಾನ್ಸ್‌ಗೆ ಶುಭ ಸಮಯ ಬಂದಿದೆ. ಇದೀಗ ವಿಜಯ್ ಸಿನಿಮಾ ಜನನಾಯಗನ್‌ಗೆ ಎದುರಾಗಿದ್ದ ಅಡೆತಡೆ ಇಲ್ಲವಾಗಿದೆ. ಶೀಘ್ರದಲ್ಲೇ ಸೆನ್ಸಾರ್ ಆಗುವ ಜನನಾಯಗನ್ ಇದೇ ತಿಂಗಳು ಕೊನೆ ಅಥವಾ ಜೂನ್‌ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.








