ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ್ದ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಭಾನುವಾರ (ಮೇ 10) ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದ ವೇಳೆ ಮತ್ತೊಂದು ಆತಂಕಕಾರಿ ದೃಶ್ಯ ಕಂಡುಬಂದಿದೆ.
ಪಂದ್ಯದ ಆರಂಭಿಕ ಹಂತದಲ್ಲಿ ಜೋಶ್ ಇಂಗ್ಲಿಸ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಕ್ಯಾಮೆರಾಗಳು ಲಕ್ನೋ ತಂಡದ ಕ್ಯಾಂಪ್ನತ್ತ ತಿರುಗಿದ್ದವು. ಈ ವೇಳೆ ಫ್ರಾಂಚೈಸಿಯ ಸಿಬ್ಬಂದಿಯೊಬ್ಬರು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಕ್ರಿಕೆಟ್ ಅಭಿಮಾನಿಗಳು ಇದನ್ನು ತಕ್ಷಣವೇ ಗಮನಿಸಿದ್ದು, ಈ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಆದಾಗ್ಯೂ, ಈ ದೃಶ್ಯಗಳು ಎಲ್ಎಸ್ಜಿ ಡಗೌಟ್ನದ್ದೋ ಅಥವಾ ಕ್ರೀಡಾಂಗಣದ ವಿಐಪಿ ಪ್ರದೇಶ ಅಥವಾ ಡ್ರೆಸ್ಸಿಂಗ್ ರೂಮ್ನದ್ದೋ ಎಂಬುದು ಇನ್ನು ಅಧಿಕೃತವಾಗಿ ಖಚಿತವಾಗಿಲ್ಲ. ಫೋನ್ ಬಳಸುತ್ತಿದ್ದ ವ್ಯಕ್ತಿ ಯಾರು ಮತ್ತು ತಂಡದಲ್ಲಿ ಅವರ ಪಾತ್ರವೇನು ಎಂಬುದು ಇನ್ನು ಪತ್ತೆಯಾಗಬೇಕಿದೆ.
ಐಪಿಎಲ್ನ ‘ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶ’ (PMOA) ನಿಯಮಗಳ ಪ್ರಕಾರ, ಕೇವಲ ತಂಡದ ಮ್ಯಾನೇಜರ್ಗಳಿಗೆ ಮಾತ್ರ ಮೊಬೈಲ್ ಫೋನ್ ಬಳಸಲು ಅನುಮತಿ ಇದೆ. ಆದರೆ, ಅವರು ಕೂಡ ಅದನ್ನು ಡ್ರೆಸ್ಸಿಂಗ್ ರೂಮ್ನಲ್ಲಿ ಮಾತ್ರ ಬಳಸಬೇಕು, ಡಗೌಟ್ನಲ್ಲಿ ಬಳಸುವಂತಿಲ್ಲ.








