ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಕರೆದೊಯ್ದಿರುವ ಕಾರಣಕ್ಕೆ ಯುವಕನ ಸಹೋದರನನ್ನು ಯುವತಿಯ ಪೋಷಕರು ಅಪಹರಿಸಿ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಅಸಲಿಗೆ ಯುವಕನ ಸಹೋದರ ಮತ್ತು ಯುವತಿಯ ಪೋಷಕರೇ ಪ್ಲಾನ್ ಮಾಡಿ ಈ ರೀತಿಯ ವಿಡಿಯೋ ಮಾಡಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿಯ ಪೋಷಕರಾದ ಬಸವರಾಜು, ಉಮೇಶ್ ಸ್ವಾಮಿ, ವಿರೂಪಾಕ್ಷ ಸೇರಿ ನಾಲ್ವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಇನ್ನು ವಿಡಿಯೋ ಮಾಡಲು ಸಹಕಾರ ನೀಡಿದ ಯುವಕನ ಸಹೋದರ ಕೋಟ್ರೇಶ್‌ಗೂ ಎಚ್ಚರಿಕೆ ನೀಡಿ, ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಬಳ್ಳಾರಿ ಮೂಲದ ದೇವಸ್ಥಾನವೊಂದರ ಅರ್ಚಕ ಶಿವು ಎಂಬಾತನ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರು ಒಪ್ಪದ ಕಾರಣಕ್ಕೆ ಶನಿವಾರ (ಮೇ 9ರಂದು) ಯುವತಿ ಮನೆ ಬಿಟ್ಟು ಶಿವು ಜೊತೆ ತೆರಳಿದ್ದರು ಎಂದು ತಿಳಿದುಬಂದಿದೆ.
ಇದರಿಂದ ಸಿಟ್ಟಿಗೆದ್ದ ಯುವತಿಯ ತಂದೆ ಮತ್ತು ಅವರ ಕಡೆಯವರು ಬ್ಯಾಡರಹಳ್ಳಿಯ ವಿಶ್ವೇಶ್ವರ ನಗರದಲ್ಲಿ ವಾಸವಿದ್ದ ಶಿವು ಅವರ ಅಣ್ಣ ಕೊಟ್ರೇಶ್ ಅವರನ್ನು ಅಪಹರಿಸಿದ್ದಾರೆ. ಆತನ ಕೈ ಕಾಲು ಕಟ್ಟಿ, ಹಲ್ಲೆ ನಡೆಸಿದ್ದಾರೆ. ನಂತರ ಆತನಿಂದ ವಿಡಿಯೋ ಮಾಡಿಸಿ, ಆ ವಿಡಿಯೋವನ್ನ ಶಿವುಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಯುವತಿಯ ಪೋಷಕರು ಶಿವು ಸಹೋದರ ಕೋಟ್ರೇಶ್‌ನನ್ನು ಪ್ರಶ್ನಿಸಿ ಹಲ್ಲೆ ನಡೆಸಿದಂತೆ ನಾಟಕವಾಡಿ ಬಳಿಕ ಇಬ್ಬರು ಸೇರಿ ಅಪಹರಣದ ಕಥೆ ಸೃಷ್ಟಿಸಿದ್ದರು. ಅದರಂತೆ ಯುವತಿಯ ಪೋಷಕರು, ಕೋಟ್ರೇಶ್‌ನನ್ನು ಅಪಹರಿಸಿದಂತೆ ಮಾಡಿ, ಇಶಾ ಫೌಂಡೇಶ್‌ನ ಬಳಿ ಇರುವ ಸಂಬಂಧಿಯೊಬ್ಬರ ಮನೆಗೆ ಕರೆದೊಯ್ದು, ಹಲ್ಲೆ ಮಾಡಿದಂತೆ ವಿಡಿಯೋ ಮಾಡಿದ್ದಾರೆ.
ಬಳಿಕ ಕೋಟ್ರೇಶ್ ಮೂಲಕ, ಶಿವು ಎಲ್ಲಿದ್ದರೂ ಅವರ ಯುವತಿಯನ್ನು ವಾಪಸ್ ಕರೆತಂದು ಅವರಿಗೆ ಒಪ್ಪಿಸಿ, ನನ್ನನ್ನು ಕರೆದೊಯ್ಯುವಂತೆ ವಿಡಿಯೋ ಮಾಡಿ, ಶಿವುಗೆ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಟ್ರೇಶ್ ಸಂಬಂಧಿಯೊಬ್ಬರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೋಟ್ರೇಶ್, ಯುವತಿಯ ಪೋಷಕರು ಹಾಗೂ ಇತರರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಅಪಹರಣದ ನಾಟಕ ಬೆಳಕಿಗೆ ಬಂದಿದೆ.








