ಬೆಂಗಳೂರು: ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ನಡುವೆಯೇ ರಾಜಧಾನಿ ಬೆಂಗಳೂರಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಪ್ರಧಾನಿಗಳು ಸಂಚರಿಸಬೇಕಿದ್ದ ಕಗ್ಗಲೀಪುರದ ತಾತಗುಣಿ ರಸ್ತೆಯ ಸಮೀಪದಲ್ಲಿ ಜಿಲೇಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಭದ್ರತಾ ದೃಷ್ಟಿಯಿಂದ ಇದು ಅತ್ಯಂತ ಗಂಭೀರ ವಿಚಾರವಾಗಿ ಪರಿಣಮಿಸಿದೆ.
ಬದಲಾದ ಪ್ರಧಾನಿ ಕಾರ್ಯಕ್ರಮ ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ 1.05ಕ್ಕೆ ಬೆಂಗಳೂರಿನ ಎಚ್ಎಎಲ್ (HAL) ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಅಲ್ಲಿಂದ ಅವರು ವಿಶೇಷ ವಿಮಾನದ ಮೂಲಕ ಹೈದರಾಬಾದ್ಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಸ್ಫೋಟಕಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅವರ ಪ್ರಯಾಣದಲ್ಲಿ ವಿಳಂಬವಾಗಿದೆ. ಸದ್ಯ ಪ್ರಧಾನಿಗಳು ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರಿಂದ ಓರ್ವನ ಬಂಧನ ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಸ್ಫೋಟಕಗಳಿದ್ದ ಸ್ಥಳವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಆತನನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಜಿಲೇಟಿನ್ ಕಡ್ಡಿಗಳನ್ನು ಅಲ್ಲಿಗೆ ತಂದವರು ಯಾರು ಮತ್ತು ಇದರ ಹಿಂದೆ ಯಾವುದಾದರೂ ಸಂಚಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಈಗಾಗಲೇ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೂ ರಸ್ತೆ ಬದಿಯಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಪೊಲೀಸ್ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಸದ್ಯ ತಾತಗುಣಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.








