ಬೆಂಗಳೂರು : ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ (BJP) ಐತಿಹಾಸಿಕ ವಿಜಯ ಸಾಧಿಸಿದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಬಂಗಾಳದ ಗೆಲುವಿನ ಸಂಭ್ರಮದ ಜೊತೆಗೆ ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧ ಮತ್ತು ದೇಶದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರವನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು.
ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಒಂದೊಂದು ಸಮಸ್ಯೆ ಇದ್ದೇ ಇರುತ್ತದೆ. ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ದೊರೆಯುತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಕೇರಳದಲ್ಲಿ ಬಹುಮತದೊಂದಿಗೆ ಚುನಾವಣೆ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಕರ್ನಾಟಕದಲ್ಲೂ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಆಂತರಿಕ ಕಚ್ಚಾಟವನ್ನು ಮೋದಿ ಲೇವಡಿ ಮಾಡಿದರು.
ಬೆಂಗಳೂರನ್ನು ಭಾರತದ ಭವಿಷ್ಯದ ಎಂಜಿನ್ ಎಂದು ಕರೆದ ಪ್ರಧಾನಿ, ‘ಇಂದು ಇಡೀ ಜಗತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದರೆ ಅದಕ್ಕೆ ಬೆಂಗಳೂರಿನ ಯುವಶಕ್ತಿಯೇ ಕಾರಣ. ಕರ್ನಾಟಕದ ಐಟಿ ನೈಪುಣ್ಯ ಮತ್ತು ಸಂಶೋಧನೆಗಳು ದೇಶವನ್ನು ಸ್ವಾವಲಂಬಿಯಾಗಿಸುತ್ತಿವೆ’ ಎಂದರು. ಅಲ್ಲದೆ, ಕೊರೊನಾ ನಂತರದ ಆರ್ಥಿಕ ಚೇತರಿಕೆಯಲ್ಲಿ ಕರ್ನಾಟಕದ ರೈತರು ಮತ್ತು ಉದ್ಯಮಿಗಳ ಕೊಡುಗೆಯನ್ನು ಸ್ಮರಿಸಿದರು.
ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ‘ಭಾರತವು ಬಲಿಷ್ಠವಾಗಬೇಕಾದರೆ ಅದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ. ನಮಗೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಬಲವೂ ಬೇಕು. ಶ್ರೀ ಶ್ರೀ ರವಿಶಂಕರ್ ಗುರೂಜಿಯವರಂತಹ ಮಹನೀಯರು ಈ ಕೆಲಸವನ್ನು ಜಾಗತಿಕ ಮಟ್ಟದಲ್ಲಿ ಮಾಡುತ್ತಿದ್ದಾರೆ. ಅವರ 70ನೇ ಜನ್ಮೋತ್ಸವದ ಸಂದರ್ಭದಲ್ಲಿ ಹೊಸ ಧ್ಯಾನ ಮಂದಿರ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ’ ಎಂದು ಹೇಳಿದರು.








