ಡೆನ್ವರ್ (ಅಮೆರಿಕ): ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿಯೊಬ್ಬ ‘ಫ್ರಾಂಟಿಯರ್ ಏರ್ಲೈನ್ಸ್’ ವಿಮಾನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಕನಿಷ್ಠ 17 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಬೇಲಿಯನ್ನು ದಾಟಿ ರನ್ವೇಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ, ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದ ಫ್ರಾಂಟಿಯರ್ ಏರ್ಲೈನ್ಸ್ ವಿಮಾನದತ್ತ ಓಡಿ ಬಂದಿದ್ದಾನೆ.ವೇಗವಾಗಿ ಚಲಿಸುತ್ತಿದ್ದ ವಿಮಾನದ ರೆಕ್ಕೆ ಅಥವಾ ಇಂಜಿನ್ ಭಾಗಕ್ಕೆ ಆತ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಮಾನದ ಪೈಲಟ್ ತುರ್ತು ಬ್ರೇಕ್ ಹಾಕಿದ ಪರಿಣಾಮವಾಗಿ ವಿಮಾನದ ಒಳಗೆ ಪ್ರಯಾಣಿಕರು ಸೀಟಿನಿಂದ ಜಿಗಿದು ಬಿದ್ದಿದ್ದಾರೆ. ಇದರಿಂದ ಸುಮಾರು 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.








