ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಜಾತಿ ನಿಂದನೆ ಪ್ರಕರಣದಿಂದ ಆರೋಪಿಯನ್ನು ಕೈಬಿಡಲು ಈ ಹಣಕ್ಕೆ ಬೇಡಿಕೆಯಿಟ್ಟಿದ್ದು, ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಜಾಕೀರ್ ಇನಾಂದಾರ್ ನೇತೃತ್ವದ ತಂಡ ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದಿದೆ.
ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಆನಂದ್ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸ್ನಲ್ಲಿ ಅವರನ್ನು ಬಂಧಿಸದೆ ಇರಲು ಮತ್ತು ಇನ್ನೊಂದು ಕೇಸ್ನಲ್ಲಿ ಅವರ ಹೆಸರನ್ನು ಕೈಬಿಡಲು ಪಿಐ ವೀರಣ್ಣ ದೊಡ್ಡಮನಿ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ದೂರು ನೀಡಿದ್ದಾರೆ. ಈ ಎರಡು ಪ್ರಕರಣಗಳ ಇತ್ಯರ್ಥಕ್ಕಾಗಿ ಒಟ್ಟು ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುವ ಒಪ್ಪಂದವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲೋಕಾಯುಕ್ತ ದಾಳಿ: ಲಂಚ ನೀಡಲು ಇಚ್ಛಿಸದ ವ್ಯಕ್ತಿಯು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಶನಿವಾರ ಲೋಕಾಯುಕ್ತ ಡಿವೈಎಸ್ಪಿ ಜಾಕೀರ್ ಇನಾಂದಾರ್ ನೇತೃತ್ವದ ತಂಡವು ಗುರುಮಠಕಲ್ನಲ್ಲಿ ಕಾರ್ಯಾಚರಣೆ ನಡೆಸಿತು. ಇನ್ಸ್ಪೆಕ್ಟರ್ ಅವರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಹೊಂಚು ಹಾಕಿದ್ದ ಲೋಕಾಯುಕ್ತ ತಂಡ, ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದೆ.
ಮುಂದಿನ ಕ್ರಮ: ದಾಳಿಯ ವೇಳೆ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿಯ ಕೈಗಳಿಗೆ ರಾಸಾಯನಿಕ ಹಚ್ಚಿ ಪರೀಕ್ಷೆ ನಡೆಸಿದಾಗ ಲಂಚ ಪಡೆದಿರುವುದು ದೃಢಪಟ್ಟಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಇನ್ಸ್ಪೆಕ್ಟರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಠಾಣೆಯ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








