ನ್ಯೂಯಾರ್ಕ್: ಕೊರೊನಾ ಮಾದರಿಯಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಹಂಟಾವೈರಸ್ (Hantavirus) ಬಗ್ಗೆ ಜಾಗತಿಕ ಎಚ್ಚರಿಕೆ ನೀಡಿದೆ. ಈಗಾಗಲೇ ಐದು ದೇಶಗಳಲ್ಲಿ ಹಂಟಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ವಿಶೇಷವಾಗಿ ಅಂತರಾಷ್ಟ್ರೀಯ ಪ್ರವಾಸಿ ಹಡಗುಗಳು (Cruise Ships) ವೈರಸ್ ಹರಡುವ ಕೇಂದ್ರಗಳಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ಅಮೆರಿಕ ಸೇರಿದಂತೆ ಐದು ಪ್ರಮುಖ ರಾಷ್ಟ್ರಗಳಲ್ಲಿ ಹಂಟಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಗಳು ತುರ್ತು ಪರಿಸ್ಥಿತಿಗೆ ಸಜ್ಜಾಗಿವೆ. ಸೋಂಕು ಪತ್ತೆಯಾದ ಪ್ರದೇಶಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ವೈರಸ್ ಹರಡುವಿಕೆಯನ್ನು ತಡೆಯಲು ಅಂತರಾಷ್ಟ್ರೀಯ ಪ್ರಯಾಣದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಿದೆ.
ಇತ್ತೀಚೆಗೆ ಕ್ರೂಸ್ ಹಡಗುಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಪ್ರವಾಸ ಮುಗಿಸಿ ಬರುವ ಹಡಗುಗಳನ್ನು ಕಡ್ಡಾಯವಾಗಿ ತಪಾಸಣೆ ಮತ್ತು ನೈರ್ಮಲ್ಯೀಕರಣ (Sanitization) ಮಾಡಲು ನಿರ್ಧರಿಸಲಾಗಿದೆ.
ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಜ್ವರ ಅಥವಾ ಉಸಿರಾಟದ ಸಮಸ್ಯೆ ಕಂಡುಬಂದರೆ ತಕ್ಷಣವೇ ಕ್ವಾರಂಟೈನ್ ಮಾಡಲು ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ.
ಇದು ಮುಖ್ಯವಾಗಿ ಇಲಿಗಳು ಮತ್ತು ಹೆಗ್ಗಣಗಳ ಮೂಲಕ ಹರಡುವ ವೈರಸ್. ಸೋಂಕಿತ ಇಲಿಗಳ ಮಲ-ಮೂತ್ರ ಅಥವಾ ಲಾಲಾರಸದ ಸಂಪರ್ಕಕ್ಕೆ ಬಂದರೆ ಮನುಷ್ಯರಿಗೆ ಈ ರೋಗ ತಗಲುತ್ತದೆ.








