ಚಿಕ್ಕಬಳ್ಳಾಪುರ : ರಾಜ್ಯದಲ್ಲೊಂದು ವಿಚಿತ್ರವಾದ ಘಟನೆ ನಡೆದಿದ್ದು, ದೇವನಹಳ್ಳಿಯ ಯುವತಿಯೊಬ್ಬಳು ತಾಯಿಯ ತಂಗಿಯ ಮಗನನ್ನೇ (ವರಸೆಯಲ್ಲಿ ತಮ್ಮ) ಪ್ರೀತಿಸಿ ಮದುವೆಯಾಗಿರುವ ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29), ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಎಂಬಾತನನ್ನು ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ರಕ್ಷಣೆ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಶಶಿಕಲಾ ಮತ್ತು ಪ್ರವೀಣ್ ಸಂಬಂಧಿಕರಾಗಿದ್ದು, ಶಶಿಕಲಾಳ ತಾಯಿಯ ತಂಗಿಯ ಮಗನೇ ಪ್ರವೀಣ್. ಅಂದರೆ, ವರಸೆಯಲ್ಲಿ ಇವರಿಬ್ಬರು ಅಕ್ಕ-ತಮ್ಮನಾಗಬೇಕು. ಇವರ ಪ್ರೀತಿಯ ವಿಷಯ ತಿಳಿದ ಪೋಷಕರು, ಈ ಸಂಬಂಧ ಸಮಾಜದಲ್ಲಿ ಒಪ್ಪಿತವಲ್ಲ ಎಂದು ವಿರೋಧಿಸಿದ್ದರು. ಅಲ್ಲದೆ, ಶಶಿಕಲಾಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿ ಇದೇ ಮೇ 29ಕ್ಕೆ ಮದುವೆ ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಶಶಿಕಲಾ ಮನೆಯಿಂದ ಹೊರಬಂದು ಪ್ರವೀಣ್‌ನನ್ನು ಮದುವೆಯಾಗಿದ್ದಾಳೆ.
ಮದುವೆಯಾದ ಬಳಿಕ ಈ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ’ ಎಂದು ಶಶಿಕಲಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇತ್ತ ಪೋಷಕರು ‘ವರಸೆಯಲ್ಲಿ ತಮ್ಮನಾಗುವವನನ್ನೇ ಮದುವೆಯಾಗಿ ಇಡೀ ಕುಟುಂಬಕ್ಕೆ ಅವಮಾನ ತಂದಿದ್ದೀಯಾ’ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
ಕುಟುಂಬದ ವಿರೋಧದ ನಡುವೆ ವಿವಾಹ: ಈ ಸಂಬಂಧಕ್ಕೆ ಕುಟುಂಬದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವರಸೆಯಲ್ಲಿ ಅಕ್ಕ-ತಮ್ಮನಾಗುವವರು ಮದುವೆಯಾಗುವುದು ಧರ್ಮ ಹಾಗೂ ಸಂಪ್ರದಾಯಕ್ಕೆ ವಿರುದ್ಧ ಎಂಬ ಕಾರಣಕ್ಕೆ ಮನೆಯವರು ಈ ಮದುವೆಗೆ ಒಪ್ಪಿರಲಿಲ್ಲ. ಆದರೆ ಮನೆಯವರ ಮಾತಿಗೆ ಮಣಿಯದ ಶಶಿಕಲಾ, ತನ್ನಿಷ್ಟದಂತೆ ಪ್ರವೀಣ್ ಕೈಹಿಡಿದಿದ್ದಾಳೆ. ಸದ್ಯ ಈ ನವಜೋಡಿ ಸಮಾಜ ಮತ್ತು ಕುಟುಂಬದ ಕಣ್ಣು ತಪ್ಪಿಸಿ ಒಂದಾಗಿದ್ದಾರೆ.
ರಕ್ಷಣೆ ಕೋರಿ ಎಸ್‌ಪಿ ಕಚೇರಿಗೆ ಭೇಟಿ: ಮದುವೆಯಾದ ಬೆನ್ನಲ್ಲೇ ಕುಟುಂಬಸ್ಥರಿಂದ ತಮಗೆ ಪ್ರಾಣಾಪಾಯವಿರಬಹುದು ಎಂದು ಆತಂಕಗೊಂಡಿರುವ ಈ ಜೋಡಿ, ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಾವಿಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿಗೆಯಿಂದ ವಿವಾಹವಾಗಿರುವುದಾಗಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.ಈ ಪ್ರಕರಣವು ಸ್ಥಳೀಯವಾಗಿ ಭಾರೀ ಕುತೂಹಲ ಮೂಡಿಸಿದ್ದು, ರಕ್ತಸಂಬಂಧದ ನಡುವೆ ನಡೆದ ಈ ವಿವಾಹದ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಸದ್ಯ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.








