ಬೆಂಗಳೂರು: ರಾಜಧಾನಿಯ ಹೊರವಲಯದ ಡಾಬಸ್‌ಪೇಟೆಯ ಅಂಚೆಮನೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಆರು ವಾಹನಗಳ ನಡುವೆ ಡಿಕ್ಕಿ: ಈ ಸರಣಿ ಅಪಘಾತದಲ್ಲಿ ಒಟ್ಟು ಆರು ವಾಹನಗಳು ಜಖಂಗೊಂಡಿವೆ. ಒಂದು ಬೈಕ್, ಎರಡು ಕಾರುಗಳು, ಒಂದು ಲಾರಿ, ಸರ್ಕಾರಿ ಬಸ್ ಹಾಗೂ ಬೊಲೆರೋ ಜೀಪ್ ಪರಸ್ಪರ ಡಿಕ್ಕಿ ಹೊಡೆದಿದ್ದು, ವಾಹನಗಳು ಜರ್ಜರಿತವಾಗಿವೆ. ವೇಗವಾಗಿ ಬಂದ ವಾಹನವೊಂದು ನಿಯಂತ್ರಣ ತಪ್ಪಿ ಮುಂದಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಗಾಯಾಳುಗಳ ಆಸ್ಪತ್ರೆಗೆ ದಾಖಲು: ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ದಾರಿಹೋಕರು ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡ 10ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್: ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಲ್ಲೇ ಈ ಸರಣಿ ಅಪಘಾತ ನಡೆದಿದ್ದರಿಂದ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ತೀವ್ರ ಪರದಾಡುವಂತಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು: ವಿಷಯ ತಿಳಿಯುತ್ತಿದ್ದಂತೆಯೇ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕ್ರೇನ್ ಮೂಲಕ ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








