ವಿಜಯಪುರ: ಜಿಲ್ಲೆಯ ಜನತೆ ಬೆಚ್ಚಿಬೀಳುವಂತಹ ಘಟನೆಯೊಂದು ನಗರದ ರಾಜಕುಮಾರ್ ಲೇಔಟ್ನಲ್ಲಿ ಮಂಗಳವಾರ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಹಸುಳೆಯ ಮೇಲೆ ಬೀದಿ ನಾಯಿಗಳ ಗುಂಪು ಭೀಕರ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿದೆ.
ನಡೆದಿದ್ದೇನು?
ಸ್ಥಳೀಯ ನಿವಾಸಿ ಸಂತೋಷ್ ಬಿರಾದಾರ್ ಎಂಬುವವರ 3 ವರ್ಷದ ಪುತ್ರ ವಿರಾಜ್ ಎಂದಿನಂತೆ ತನ್ನ ಮನೆಯ ಮುಂಭಾಗ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ನುಗ್ಗಿ ಬಂದ ಬೀದಿ ನಾಯಿಗಳ ಹಿಂಡು ಮಗುವಿನ ಮೇಲೆರಗಿದೆ. ಅತಿ ಕ್ರೂರವಾಗಿ ವರ್ತಿಸಿದ ಒಂದು ನಾಯಿ, ಮಗುವನ್ನು ಕಚ್ಚಿ ಹಿಡಿದು ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದಿದೆ.
ಮಗುವಿನ ಕಿರುಚಾಟ ಮತ್ತು ನಾಯಿಯ ಅಟ್ಟಹಾಸವನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಹರಸಾಹಸಪಟ್ಟು ನಾಯಿಗಳನ್ನು ಓಡಿಸುವಲ್ಲಿ ಯಶಸ್ವಿಯಾದ ಸ್ಥಳೀಯರು, ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ರಕ್ಷಿಸಿದ್ದಾರೆ. ಮಗುವಿನ ಬೆನ್ನು ಮತ್ತು ತೊಡೆಯ ಭಾಗಕ್ಕೆ ಆಳವಾದ ಗಾಯಗಳಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಾಯಿ ಮಗುವನ್ನು ಎಳೆದೊಯ್ಯುತ್ತಿರುವ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಕಂಡು ಪೋಷಕರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.








