ನವದೆಹಲಿ:ಪ್ರಮುಖ ಐಟಿ ಸೇವಾ ಸಂಸ್ಥೆಯಾದ ಕಾಗ್ನಿಜೆಂಟ್ (Cognizant) ಜಾಗತಿಕ ಮಟ್ಟದಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯ ಹೊಸ ಕಾರ್ಯತಂತ್ರದ ಭಾಗವಾಗಿ ಸುಮಾರು 12,000 ದಿಂದ 15,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಕಾಗ್ನಿಜೆಂಟ್ ಸಂಸ್ಥೆಯು ಒಟ್ಟು 3,57,000 ಉದ್ಯೋಗಿಗಳನ್ನು ಹೊಂದಿದ್ದು, ಈ ಪೈಕಿ 2.5 ಲಕ್ಷಕ್ಕೂ ಹೆಚ್ಚು ಜನರು ಭಾರತದಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಈ ಉದ್ಯೋಗ ಕಡಿತದ ಬಿಸಿ ಭಾರತೀಯ ಉದ್ಯೋಗಿಗಳಿಗೆ ಅತಿ ಹೆಚ್ಚು ತಟ್ಟಲಿದೆ.
ಕಂಪನಿಯು ತನ್ನ ಕಾರ್ಯಾಚರಣೆಯನ್ನು ಆಧುನೀಕರಿಸಲು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ‘ಪ್ರಾಜೆಕ್ಟ್ ಲೀಪ್’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಉದ್ಯೋಗಿಗಳ ಮರುಸಂಘಟನೆ ನಡೆಯುತ್ತಿದೆ.
ಉದ್ಯೋಗಿಗಳ ವಜಾ ಮತ್ತು ಪರಿಹಾರಕ್ಕಾಗಿ (Severance) ಕಂಪನಿಯು ಸುಮಾರು $320 ಮಿಲಿಯನ್ (ಸುಮಾರು ₹2,600 ಕೋಟಿ) ಮೀಸಲಿಟ್ಟಿದೆ. ಸಾಂಪ್ರದಾಯಿಕ ಐಟಿ ಸೇವೆಗಳ ಬದಲಿಗೆ ಎಐ ಆಧಾರಿತ ಸೇವೆಗಳಿಗೆ ಬದಲಾಗುತ್ತಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ.
ಕಂಪನಿಯು ಅನುಭವಿ ಮತ್ತು ಮಧ್ಯಮ ಹಂತದ (Mid-level) ಉದ್ಯೋಗಿಗಳನ್ನು ಕಡಿಮೆ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಗಳನ್ನು (ಹೊಸಬರು) ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.








