ಚೆನ್ನೈ:ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು, ಸರ್ಕಾರ ರಚನೆಯ ಪ್ರಕ್ರಿಯೆಯ ಭಾಗವಾಗಿ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಲು ಕಾಲಾವಕಾಶ ಕೋರಿದೆ.
ಸುದ್ದಿ ಸಂಸ್ಥೆ ಎಎನ್‌ಐ (ANI) ವರದಿಯ ಪ್ರಕಾರ, ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಪ್ರವೇಶ ಮಾಡಿರುವ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 118ರ ಗಡಿ ತಲುಪಲು ವಿಜಯ್ ಅವರ ಪಕ್ಷಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದೆ.
ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಬೆಂಬಲವನ್ನು ಪಡೆಯಲು ಟಿವಿಕೆ ಪಕ್ಷವು ಇತರ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದಶಕಗಳಿಂದ ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ ಪ್ರಾಬಲ್ಯವನ್ನು ವಿಜಯ್ ಅವರ ಪಕ್ಷವು ಈ ಚುನಾವಣೆಯಲ್ಲಿ ಧೂಳೀಪಟ ಮಾಡಿದೆ.
ವಿಜಯ್ ಸರ್ಕಾರ ರಚಿಸುವುದು ಹೇಗೆ?
ಸರ್ಕಾರ ರಚಿಸಲು ಅಗತ್ಯವಿರುವ 10 ಸ್ಥಾನಗಳಿಗಾಗಿ ಟಿವಿಕೆ ಪಕ್ಷವು ಕಾಂಗ್ರೆಸ್, ಪಿಎಂಕೊ (PMK), ಎಡಪಕ್ಷಗಳು (CPI-M) ಮತ್ತು ವಿಸಿಕೆ (VCK) ಅಂತಹ ಸಣ್ಣ ಪಕ್ಷಗಳ ಬೆಂಬಲವನ್ನು ಕೋರುವ ಸಾಧ್ಯತೆಯಿದೆ. ಈ ಪಕ್ಷಗಳ ಬೆಂಬಲ ದೊರೆತರೆ ವಿಜಯ್ ಅವರು ಸುಲಭವಾಗಿ ಬಹುಮತದ ಗಡಿ ದಾಟಲಿದ್ದಾರೆ.








