ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಅಧ್ಯಕ್ಷ ವಿಜಯ್, ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಖೆಯ ಅಧಿಕೃತ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಚುನಾವಣಾ ಫಲಿತಾಂಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ, ವಿಜಯ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾದರು. ತಮ್ಮ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೋರಿ ಪತ್ರ ಸಲ್ಲಿಸಿದರು.
ಮೂಲಗಳ ಪ್ರಕಾರ, ಇಂದು ನಡೆಯಲಿರುವ TVK ಶಾಸಕರ ಸಭೆಯಲ್ಲಿ ವಿಜಯ್ ಅವರನ್ನು ಅಧಿಕೃತವಾಗಿ ‘ಶಾಸಕಾಂಗ ಪಕ್ಷದ ನಾಯಕ’ನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಇರುವ ಪ್ರಮುಖ ಕಾನೂನು ಪ್ರಕ್ರಿಯೆಯಾಗಿದೆ.
ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು (Floor Test) ವಿಜಯ್ ಅವರು ರಾಜ್ಯಪಾಲರಿಂದ 2 ವಾರಗಳ ಕಾಲಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ. ಮ್ಯಾಜಿಕ್ ನಂಬರ್ ತಲುಪಲು ಅಗತ್ಯವಿರುವ ಬೆಂಬಲವನ್ನು ಕ್ರೋಢೀಕರಿಸಲು ಈ ಸಮಯವನ್ನು ಬಳಸಿಕೊಳ್ಳಲಿದ್ದಾರೆ.
ಮೈತ್ರಿ ಮಾತುಕತೆ: TVK ಪಕ್ಷವು ಬಹುಮತಕ್ಕೆ ಹತ್ತಿರವಿದ್ದರೂ, ಸ್ಥಿರ ಸರ್ಕಾರಕ್ಕಾಗಿ ಕೆಲವು ಪಕ್ಷಗಳ ಬೆಂಬಲ ಪಡೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.








