ಚೆನ್ನೈ:ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ವಿಜಯ್ ಅವರಿಗೆ ದೇಶದ ಪ್ರಮುಖ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಜಯ್ ಅವರಿಗೆ ದೂರವಾಣಿ ಕರೆ ಮಾಡಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.
ವಿಜಯ್ ಅವರ ಭರ್ಜರಿ ಗೆಲುವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, “ತಮಿಳುನಾಡಿನ ಪ್ರಗತಿಗಾಗಿ ಕೇಂದ್ರ ಸರ್ಕಾರವು ನಿಮ್ಮೊಂದಿಗೆ ಸಹಕರಿಸಲಿದೆ” ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್, “ಧನ್ಯವಾದಗಳು ಮೋದಿ ಅವರೇ, ರಾಜಕೀಯವನ್ನು ಮೀರಿ ತಮಿಳುನಾಡಿನ ಅಭಿವೃದ್ಧಿಗಾಗಿ ನಾವು ಕೇಂದ್ರದ ಬೆಂಬಲವನ್ನು ನಿರೀಕ್ಷಿಸುತ್ತೇವೆ” ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಶುಭ ಹಾರೈಕೆ: ವಿಜಯ್ ಅವರಿಗೆ ಫೋನ್ ಮಾಡಿ ಅಭಿನಂದಿಸಿದ ರಾಹುಲ್ ಗಾಂಧಿ, “ಈ ಗೆಲುವು ಯುವಶಕ್ತಿಯ ಗೆಲುವು” ಎಂದು ಬಣ್ಣಿಸಿದ್ದಾರೆ. ರಾಹುಲ್ ಅವರ ಕರೆಗೆ ಕೃತಜ್ಞತೆ ಸಲ್ಲಿಸಿರುವ ವಿಜಯ್, “ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಬ್ಬರೂ ಪ್ರಮುಖ ರಾಷ್ಟ್ರೀಯ ನಾಯಕರು ವಿಜಯ್ ಅವರಿಗೆ ಶುಭ ಕೋರಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿಯ ಮುನ್ಸೂಚನೆಯೇ ಎಂಬ ಚರ್ಚೆಗಳು ಆರಂಭವಾಗಿವೆ. ವಿಶೇಷವಾಗಿ 107 ಸ್ಥಾನಗಳನ್ನು ಗೆದ್ದಿರುವ ವಿಜಯ್, ಮ್ಯಾಜಿಕ್ ನಂಬರ್ (118) ತಲುಪಲು ಕಾಂಗ್ರೆಸ್‌ನ ಬೆಂಬಲ ಪಡೆಯಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.







