ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮಠದ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಡೀ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಬಿಎನ್ಎಸ್ 163 ಅಡಿ ನಿಷೇಧಾಜ್ಞೆ
ಮಠದಲ್ಲಿ ನಡೆಯುತ್ತಿರುವ ಸರಣಿ ಗಲಾಟೆಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಸಂಭವವಿರುವ ಕಾರಣ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮೇ 1 ರಿಂದ ಮೇ 30ರ ವರೆಗೆ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಬಿಎನ್ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಯಾವುದೇ ಸಭೆ, ಸಮಾರಂಭ ಅಥವಾ ಸುದ್ದಿಗೋಷ್ಠಿ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿವಾದಕ್ಕೆ ಕಾರಣವೇನು?
ವಚನಾನಂದ ಸ್ವಾಮೀಜಿಯವರನ್ನು ಟ್ರಸ್ಟ್ನಿಂದ ಉಚ್ಚಾಟಿಸಿದಾಗಿನಿಂದ ಮಠದಲ್ಲಿ ಅಶಾಂತಿ ಮನೆಮಾಡಿದೆ. ಪ್ರಮುಖವಾಗಿ ಮಠದ ಹಣಕಾಸಿನ ವಿಚಾರದಲ್ಲಿ ಭಾರಿ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ:
-
ಲೆಕ್ಕ ಕೊಡಿ ಅಭಿಯಾನ: ಸ್ವಾಮೀಜಿ ಬೆಂಬಲಿಗರು ಟ್ರಸ್ಟಿಗಳ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ ಆರಂಭಿಸಿದ್ದಾರೆ. ಭಕ್ತರು ನೀಡಿದ ಕಾಣಿಕೆಯ ಪಾರದರ್ಶಕ ಲೆಕ್ಕ ಬೇಕೆಂದು ಪಟ್ಟು ಹಿಡಿದಿದ್ದಾರೆ.
-
ಅವ್ಯವಹಾರದ ಆರೋಪ: ಕಳೆದ ಏಪ್ರಿಲ್ 27ರಂದು ಟ್ರಸ್ಟಿಗಳು ನೀಡಿದ ಲೆಕ್ಕವು ಸುಳ್ಳಿನ ಕಂತೆ ಎಂದು ಸ್ವಾಮೀಜಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಪೊಲೀಸ್ ನೋಟಿಸ್: ಇಂದು ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯುವ ಸೂಚನೆ ಸಿಕ್ಕ ಬೆನ್ನಲ್ಲೇ, ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ವಾಮೀಜಿ ಮತ್ತು ಟ್ರಸ್ಟಿಗಳಿಗೆ ಮುನ್ನೆಚ್ಚರಿಕೆ ನೋಟಿಸ್ ಜಾರಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಕಳವಳ
ಮಾರ್ಚ್ 10ರಿಂದ ಮಠದಲ್ಲಿ ನಿರಂತರವಾಗಿ ಪ್ರತಿಭಟನೆ ಮತ್ತು ಗಲಾಟೆಗಳು ನಡೆಯುತ್ತಿವೆ. “ಪದೇ ಪದೇ ಮಠಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ, ಇದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ” ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಹೀಗಾಗಿ ಯಾವುದೇ ಪ್ರಚೋದನಕಾರಿ ಸಭೆ ನಡೆಸದಂತೆ ಎರಡೂ ಬಣಗಳಿಗೆ ತಾಕೀತು ಮಾಡಲಾಗಿದೆ.
ಸದ್ಯ ಪಂಚಮಸಾಲಿ ಪೀಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಜಿಲ್ಲಾಡಳಿತದ ಮುಂದಿನ ನಡೆಯ ಬಗ್ಗೆ ಭಕ್ತರಲ್ಲಿ ಕುತೂಹಲ ಮೂಡಿದೆ.
ಶೃಂಗೇರಿ ಮರುಎಣಿಕೆ: ಕಾಂಗ್ರೆಸ್ ಅಭ್ಯರ್ಥಿಗೆ ಬಿದ್ದ ಮತಗಳನ್ನು ತಿದ್ದಲಾಗಿದೆ- ಡಿಸಿಎಂ ಡಿ.ಕೆ.ಶಿವಕುಮಾರ್
ರಾಜ್ಯಾದ್ಯಂತ ಪ್ಯಾಲಿಯೇಟಿವ್ ಕೇರ್ ಕೇಂದ್ರ ವಿಸ್ತರಣೆಗೆ ಚಿಂತನೆ: ಸಚಿವ ದಿನೇಶ್ ಗುಂಡೂರಾವ್








