ಸೋಮವಾರ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ರಾಜ್ಯದಾದ್ಯಂತ ಇರುವ ತೃಣಮೂಲ ಕಾಂಗ್ರೆಸ್ (TMC) ಕಚೇರಿಗಳಲ್ಲಿನ ಫ್ಲೆಕ್ಸ್ ಬೋರ್ಡ್ಗಳು, ಪಕ್ಷದ ಬ್ಯಾನರ್ಗಳು ಮತ್ತು ಬಂಟಿಂಗ್ಗಳನ್ನು ಹಾನಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆಗಳಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಕೇಸರಿ ಪಡೆ ನಿರಾಕರಿಸಿದೆ.
ಚುನಾವಣಾ ಫಲಿತಾಂಶದ ಟ್ರೆಂಡ್ಗಳು ಸ್ಪಷ್ಟವಾಗುತ್ತಿದ್ದಂತೆ, ದಕ್ಷಿಣ 24 ಪರಗಣದ ಬರುಯಿಪುರ, ಕೂಚ್ ಬೆಹಾರ್ನ ತುಫಾಂಗಂಜ್ ಮತ್ತು ಉತ್ತರ 24 ಪರಗಣದ ಪಾನಿಹಾಟಿಯಲ್ಲಿರುವ ಪಕ್ಷದ ಕಚೇರಿಗಳ ಹೊರಗೆ “ದುಷ್ಕರ್ಮಿಗಳು” ಜಮಾಯಿಸಿ ಧ್ವಂಸ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ಬರುಯಿಪುರದಲ್ಲಿ ಫ್ಲೆಕ್ಸ್ ಬೋರ್ಡ್ಗಳು ಮತ್ತು ಬ್ಯಾನರ್ಗಳನ್ನು ಹರಿದು ಹಾಕಲಾಗಿದೆ. ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಭಾವಚಿತ್ರಗಳನ್ನು ನೆಲಕ್ಕೆ ಎಸೆಯಲಾಗಿದೆ ಎಂದು ಸ್ಥಳೀಯ ಟಿಎಂಸಿ ನಾಯಕರೊಬ್ಬರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಕಚೇರಿಯ ಹೊರಗಿದ್ದ ಗುಂಪನ್ನು ಚದುರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬರ್ಧಮಾನ್ ಜಿಲ್ಲೆಯ ಜಮುರಿಯಾದಲ್ಲಿ ಅಪರಿಚಿತ ವ್ಯಕ್ತಿಗಳು ಸ್ಥಳೀಯ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅಸನ್ಸೋಲ್ನಲ್ಲಿಯೂ ಟಿಎಂಸಿ ಕಚೇರಿಯನ್ನು ಧ್ವಂಸಗೊಳಿಸಲಾಗಿದ್ದು, ಇದರ ಹಿಂದೆ ಬಿಜೆಪಿ ಬೆಂಬಲಿಗರಿದ್ದಾರೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಕಸ್ಬಾ ಪ್ರದೇಶದ ರೂಬಿ ಮೋರ್ ಬಳಿ ಬಿಜೆಪಿ ಧ್ವಜ ಹಿಡಿದಿದ್ದ ಗುಂಪೊಂದು ಕ್ಲಬ್ ಒಂದನ್ನು ಧ್ವಂಸಗೊಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, “ನಾವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಬಿಜೆಪಿ ಸ್ಪಷ್ಟನೆ:
ತನ್ನ ಬೆಂಬಲಿಗರು ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಹಿರಿಯ ಬಿಜೆಪಿ ನಾಯಕ ಮತ್ತು ನೌಪಾರಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು ಟಿಎಂಸಿ ಆರೋಪಗಳನ್ನು ತಳ್ಳಿಹಾಕಿದ್ದು, “ಇದು ಟಿಎಂಸಿಯೊಳಗಿನ ಆಂತರಿಕ ಕಲಹದ ಫಲಿತಾಂಶ” ಎಂದು ತಿರುಗೇಟು ನೀಡಿದ್ದಾರೆ.








