ಬೆಂಗಳೂರು: ಪಿಂಚಣಿದಾರರೆಲ್ಲರೂ ಒಂದೇ ವರ್ಗಕ್ಕೆ ಸೇರಿದವರು. ನಿವೃತ್ತಿಯ ದಿನಾಂಕವನ್ನು ಮಾನದಂಡವಾಗಿಟ್ಟುಕೊಂಡು ಅವರಲ್ಲಿ ತಾರತಮ್ಯ ಮಾಡುವುದು ಸಂವಿಧಾನ ಬಾಹಿರ,” ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಐತಿಹಾಸಿಕ ತೀರ್ಪಿನಿಂದಾಗಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ನೂರಾರು ನಿವೃತ್ತ ನೌಕರರ ಕುಟುಂಬಗಳಿಗೆ ದಶಕಗಳ ಕಾಲದ ಹೋರಾಟದ ನಂತರ ನ್ಯಾಯ ಸಿಕ್ಕಂತಾಗಿದೆ.
ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ತಾರಾ ವಿತಸ್ತ ಗಂಜು ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ಪ್ರಕಟಿಸಿದೆ. “ಪಿಂಚಣಿದಾರರನ್ನು ದಿನಾಂಕದ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಂಗಡಿಸುವುದು ಸಂವಿಧಾನದ 14ನೇ ವಿಧಿಯಡಿ (ಸಮಾನತೆಯ ಹಕ್ಕು) ನೀಡಲಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,” ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ 2005ರ ಜುಲೈ 1ಕ್ಕಿಂತ ಮೊದಲು ನಿವೃತ್ತರಾದ ಕೆಪಿಸಿಎಲ್ ನೌಕರರ ಕುಟುಂಬಗಳಿಗೂ ಪರಿಷ್ಕೃತ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಲು ಆದೇಶಿಸಿದೆ.
ಕೇಸ್ನ ವಿಚಾರಣೆ ವೇಳೆ, ಪಿಂಚಣಿ ಪರಿಷ್ಕರಣೆಯಿಂದ ಸುಮಾರು 250 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಕೆಪಿಸಿಎಲ್ ವಾದಿಸಿತ್ತು. ಆದರೆ ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿತು. ಅರ್ಜಿದಾರರು ಹಳೆಯ ಬಾಕಿ ಮೊತ್ತದ (Arrears) ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ.ಹೀಗಾಗಿ, ಕೇವಲ 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೌಲಭ್ಯ ಒದಗಿಸಲು ಸಾಧ್ಯವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ನ ಪ್ರಸಿದ್ಧ ಡಿ.ಎಸ್. ನಕಾರಾ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಪೀಠ, ಪಿಂಚಣಿ ಸೌಲಭ್ಯವು ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂದು ಪುನರುಚ್ಚರಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಕೆಪಿಸಿಎಲ್ ಹೊರಡಿಸಿದ್ದ ಸುತ್ತೋಲೆಯೊಂದರ ಪ್ರಕಾರ, 2005ರ ಜುಲೈ 1ರ ನಂತರ ನಿವೃತ್ತರಾದವರಿಗೆ ಮಾತ್ರ ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿ ಎಂ.ಎಸ್. ರಾಜೇಶ್ವರಿ ಸೇರಿದಂತೆ ಹಲವು ಕುಟುಂಬ ಪಿಂಚಣಿದಾರರು ಕಾನೂನು ಹೋರಾಟ ನಡೆಸಿದ್ದರು. ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ವಿಭಾಗೀಯ ಪೀಠವು, ಮುಂದಿನ ಮೂರು ತಿಂಗಳೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅರ್ಹರಿಗೆ ಪರಿಷ್ಕೃತ ಪಿಂಚಣಿ ಪಾವತಿಸುವಂತೆ ಕೆಪಿಸಿಎಲ್ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.








